ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಬಿರುಸುಗೊಂಡಿರುವ ನಡುವೆಯೇ, ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯ ಬಳಿಕ ರಾಜಕೀಯ ಪಥ ಬದಲಾಗಿದೆ ಎಂದು ಸಂಕೇತಾತ್ಮಕವಾಗಿ ಹೇಳಿದ್ದು, ಇದು ನಾಯಕತ್ವ ಬದಲಾವಣೆಯ ಸೂಚನೆಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸೂರ್ಯನ ಪಥ ಬದಲಾಗಿದ್ರೆ ಹೇಗೆ ಬದಲಾವಣೆ ಆಗುತ್ತದೋ, ಹಾಗೇ ನಮ್ಮ ಪಥವೂ ಬದಲಾಗಿದೆ. ನಮ್ಮ ಹೇಳಿಕೆಯಂತೆ ಸಂಕ್ರಾಂತಿಯಲ್ಲೇ ಬದಲಾವಣೆ ಆಗಿದೆ ಎಂದು ಬಸವರಾಜ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರ ಪಾತ್ರವನ್ನು ಶ್ಲಾಘಿಸಿದ ಅವರು, ಹೊಸಬರು ಶಾಸಕರಾಗಿ ಗೆಲ್ಲಲು ಡಿಕೆಶಿ ಕಾರಣಕರ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಡಿಕೆಶಿ ಕೂಡ ಕನಿಷ್ಠ 2 ವರ್ಷಗಳ ಕಾಲ ಮುಖ್ಯಮಂತ್ರಿ ಆಗಲಿ ಎಂಬುದು ನಮ್ಮ ಆಶಯ. ಡಿಕೆಶಿ CM ಆಗಬೇಕು ಎನ್ನುವ ಅಭಿಪ್ರಾಯ ಮೊದಲಿನಿಂದಲೂ ಇತ್ತು. ಈಗ ಅದು ಸಾಕಾರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗಳು ಕಾಂಗ್ರೆಸ್‌ನೊಳಗಿನ ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತಷ್ಟು ಇಂಧನ ತುಂಬಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯನ್ನು ಸೂಚಿಸುತ್ತಿವೆ.








