ಹಾಲಿನ ದರ ಏರಿಕೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಗೆ ಕರ್ನಾಟಕ ಉಪ ಮುಖ್ಯಮಂತ್ರಿ DK ಶಿವಕುಮಾರ್ ತಿರುಗೇಟು ನೀಡಿದ್ದಾರೆ. ರೈತರು ಬದುಕಬೇಕಲ್ಲವೇ? ಅವರಿಗೆ ಕಾಳಜಿ ಇದ್ದರೆ, ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ, ಜಿಎಸ್‌ಟಿ, ಇಂಧನ ತೈಲ ಬೆಲೆ ಕಡಿಮೆ ಮಾಡಿಸಲಿ ಎಂದು ಡಿಕೆಶಿ ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ DK ಶಿವಕುಮಾರ್, ಹಾಲಿನ ದರ ಏರಿಕೆಗೆ ವಿರೋಧ ವ್ಯಕ್ತಪಡಿಸುತ್ತಾ ಕುಮಾರಸ್ವಾಮಿ ಸರ್ಕಾರವನ್ನು ಈಸ್ಟ್ ಇಂಡಿಯಾ ಕಂಪನಿ ಎಂದು ಕಟುವಾಗಿ ಟೀಕಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹಣ ಸರ್ಕಾರಕ್ಕೆ ಹೋಗುತ್ತದೆಯೇ? ಕುಮಾರಸ್ವಾಮಿ ಅವರಿಗೆ ಹಾಲು ಒಕ್ಕೂಟದ ಬಗ್ಗೆ ಗೊತ್ತೇ ಇಲ್ಲ
ಹಾಲಿನ ದರ ಹೆಚ್ಚಳದಿಂದ ಲಾಭ ರೈತರಿಗೆ ಹೋಗುವುದಿಲ್ಲ, ಅದು ಸರ್ಕಾರಕ್ಕೆ ಹೋಗಲಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಸರ್ಕಾರಕ್ಕೆ ಹೇಗೆ ಹೋಗುತ್ತದೆ? ಹಾಗಿದ್ದರೆ, ಕುಮಾರಸ್ವಾಮಿ ಅವರಿಗೆ ಹಾಲು ಒಕ್ಕೂಟದ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಅವರು ತಮ್ಮ ಸಹೋದರನ ಬಳಿ ಮಾಹಿತಿ ಪಡೆಯಲಿ ಎಂದು ಹರಿಹಾಯ್ದರು.