ಬೆಂಗಳೂರು : ಕೊರೊನಾ ಆತಂಕದ ನಡುವೆ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ತಿಂಗಳಾಂತ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಾಗಲೇ ಡಿಕೆ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಮೇ 31ಕ್ಕೆ ಕಾಂಗ್ರೆಸ್ ಕಟ್ಟಪ್ಪನ ಪಟ್ಟಾಭಿಷೇಕ
ಅದ್ಧೂರಿ ಕಾರ್ಯಕ್ರಮದ ಮೂಲಕ ರಾಜ್ಯ ಕಾಂಗ್ರೆಸ್ ಸಿಂಹಾಸನದಲ್ಲಿ ಕೂರಬೇಕು ಎಂದುಕೊಂಡಿದ್ದ ಕನಕಪುರ ಬಂಡೆ ಆಸೆಗೆ ಕೊರೊನಾ ನೀರೆರಚಿತು. ಲಾಕ್ ಡೌನ್ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕೆಂದುಕೊಂಡಿದ್ದ ಡಿಕೆಶಿ, ಸರಳವಾಗಿ ಮೇ 31 ರಂದು ಅಧಿಕಾರ ಸ್ವೀಕರಿಸಲು ಮುಂದಾಗಿದ್ದಾರೆ. ಅಂದು ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಿವಕುಮಾರ್ ಅವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ.
ಅಜ್ಜಯ್ಯನಮಠದ ಶ್ರೀಗಳ ಸಲಹೆಯಂತೆ ಪದಗ್ರಹಣ
ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕೈಗೊಳ್ಳಲು ಡಿ.ಕೆ ಶಿವಕುಮಾರ್ ತಮ್ಮ ಇಷ್ಟದೇವರಾದ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಅಜ್ಜಯ್ಯನ ಮಠದ ಶ್ರೀಗಳ ಸಲಹೆಯನ್ನು ಪಡೆದುಕೊಂಡಿದ್ದಾರೆ.
ಅಂದ್ಹಾಗೆ ಈ ಮೊದಲು ಮೇ 20 ಇಲ್ಲವೇ 27ರಂದು ಡಿಕೆ ಪಟ್ಟಾಭಿಷೇಕ ನಡೆಯಲಿದೆ ಎನ್ನಲಾಗಿತ್ತು. ಈಗ ನೊಣವಿನಕೆರೆ ಅಜ್ಜಯ್ಯನ ಮಠದ ಶ್ರೀಗಳು ಡಿಕೆ ಶಿವಕುಮಾರ್ ಅವರ ಅಧಿಕಾರ ಸ್ವೀಕಾರಕ್ಕಾಗಿ ಮೇ 31 ಅಥವಾ ಜೂನ್ 7ರ ದಿನಾಂಕವನ್ನು ನೀಡಿದ್ದಾರೆ. ಈ ಪೈಕಿ ಮೇ 31ರಂದು ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಕೆಲ ಗಣ್ಯರಿಗಷ್ಟೇ ಕಾರ್ಯಕ್ರಮಕ್ಕೆ ಆಹ್ವಾನ
ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಸರಳವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ನಡೆಯಲಿದ್ದು, ಕಾರ್ಯಕ್ರಮಕ್ಕೆ ಆಯ್ದ 60 ಗಣ್ಯರಿಗಷ್ಟೇ ಆಹ್ವಾನ ನೀಡಲು ಚಿಂತನೆ ನಡೆಸಲಾಗಿದೆ.