ಬೆಂಗಳೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಇವಿಎಂ ವಿರುದ್ಧ ಸಮರ ಸಾರಿದ್ದರೆ, ಇತ್ತ ಕರ್ನಾಟಕದಲ್ಲಿ ಸ್ವಪಕ್ಷೀಯ ನಾಯಕರೇ ಇವಿಎಂ ಪರ ಬ್ಯಾಟಿಂಗ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿ ಚುನಾವಣೆಯಲ್ಲಿ ಮತಪತ್ರ ಬಳಸುವ ರಾಜ್ಯ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಆಕ್ಷೇಪ ಈಗ ರಾಷ್ಟ್ರಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಪಾಳಯಕ್ಕೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಗ್ರೇಟರ್ ಬೆಂಗಳೂರು ಚುನಾವಣೆ ಮತ್ತು ಮತಪತ್ರದ ಗೊಂದಲ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜೂನ್ ಅಂತ್ಯದೊಳಗೆ ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಮಹತ್ವದ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಹಳೆಯ ಪದ್ಧತಿಯಾದ ಮತಪತ್ರಗಳನ್ನು (ಬ್ಯಾಲೆಟ್ ಪೇಪರ್) ಬಳಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಆದರೆ, ಆಯೋಗದ ಈ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಡಿ ಕೆ ಸುರೇಶ್ ಹೇಳಿದ್ದೇನು
ಬ್ಯಾಲೆಟ್ ಪೇಪರ್ ಬಳಕೆಯ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಜಿಬಿಎ ಚುನಾವಣೆಯಲ್ಲಿ ಮತಪತ್ರದ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ನಾವು ತಂತ್ರಜ್ಞಾನದಲ್ಲಿ ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಮತ್ತೆ ಹಿಂದಕ್ಕೆ ಹೋಗುವ ಅಗತ್ಯವೇನಿದೆ? ರಾಜ್ಯ ಚುನಾವಣಾ ಆಯೋಗವೇ ಚುನಾವಣೆ ನಡೆಸುವುದರಿಂದ ಇಲ್ಲಿ ತಿರುಚುವಿಕೆ ಅಥವಾ ಮೋಸ ನಡೆಯಲು ಸಾಧ್ಯವಿಲ್ಲ. ಇವಿಎಂ ಬಳಕೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳುವ ಮೂಲಕ ತಂತ್ರಜ್ಞಾನದ ಪರವಾಗಿ ದನಿ ಎತ್ತಿದ್ದಾರೆ.
ರಾಹುಲ್ ಗಾಂಧಿ ವಾದಕ್ಕೆ ತದ್ವಿರುದ್ಧ ನಿಲುವು
ಡಿ.ಕೆ. ಸುರೇಶ್ ಅವರ ಈ ಹೇಳಿಕೆ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ತಣ್ಣೀರು ಎರಚಿದಂತಾಗಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಸೋಲಿನ ಬಳಿಕ ರಾಹುಲ್ ಗಾಂಧಿ ಅವರು ಇವಿಎಂ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದರು. ಇವಿಎಂ ಮತ್ತು ವಿವಿಪ್ಯಾಟ್ ತಾಳೆಯಾಗುತ್ತಿಲ್ಲ, ಮುಂದುವರಿದ ರಾಷ್ಟ್ರಗಳೇ ಬ್ಯಾಲೆಟ್ ಪೇಪರ್ ಬಳಸುವಾಗ ನಾವೇಕೆ ಇವಿಎಂ ಬಳಸಬೇಕು ಎಂದು ಪ್ರಶ್ನಿಸಿದ್ದರು. ಬೆಂಗಳೂರಿನ ಮಹದೇವಪುರ ಮತ್ತು ಕಲಬುರಗಿಯ ಆಳಂದದಲ್ಲಿ ಮತಗಳ್ಳತನ ನಡೆದಿದೆ ಎಂದು ದೆಹಲಿಯಲ್ಲಿ ಪ್ರಾತ್ಯಕ್ಷಿಕೆ ಕೂಡ ನೀಡಿದ್ದರು. ಇವಿಎಂ ಹ್ಯಾಕ್ ಆಗುತ್ತದೆ, ಅದು ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದೆ ಎಂಬುದು ರಾಹುಲ್ ಗಾಂಧಿಯವರ ಪ್ರಮುಖ ಆರೋಪವಾಗಿತ್ತು.
ಬಿಜೆಪಿಯಿಂದ ವ್ಯಂಗ್ಯದ ಸುರಿಮಳೆ
ಡಿ.ಕೆ. ಸುರೇಶ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ಘಟಕವು ಕಾಂಗ್ರೆಸ್ ನಾಯಕತ್ವದ ದ್ವಂದ್ವ ನೀತಿಯನ್ನು ಟೀಕಿಸಿದೆ. ರಾಹುಲ್ ಗಾಂಧಿಯವರ ಇವಿಎಂ ವಂಚನೆ ಎಂಬ ಸುಳ್ಳಿನ ಬಲೂನಿಗೆ ಡಿ.ಕೆ. ಸುರೇಶ್ ಅವರೇ ಸೂಜಿ ಚುಚ್ಚಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಲೇವಡಿ ಮಾಡಿದೆ.
ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಬ್ಯಾಲೆಟ್ ಪೇಪರ್ ಕಾಲಕ್ಕೆ ಮರಳುವುದು ಪ್ರಗತಿಯಿಂದ ಅಧೋಗತಿಗೆ ಹೋದಂತೆ ಎಂಬ ಸತ್ಯ ಡಿ.ಕೆ. ಸುರೇಶ್ ಅವರಿಗೆ ಅರ್ಥವಾಗಿದೆ. ಆದರೆ ರಾಹುಲ್ ಗಾಂಧಿ ಅವರು ಇವಿಎಂ ಹ್ಯಾಕ್ ಆಗುತ್ತದೆ ಎಂದು ಬಾಲಿಶ ಹೇಳಿಕೆ ನೀಡುತ್ತಲೇ ಇದ್ದಾರೆ. ಸ್ವತಃ ಕಾಂಗ್ರೆಸ್ ನಾಯಕರೇ ರಾಹುಲ್ ಮಾತನ್ನು ನಂಬುತ್ತಿಲ್ಲ ಎನ್ನುವುದಕ್ಕೆ ಸುರೇಶ್ ಅವರ ಹೇಳಿಕೆಯೇ ಸಾಕ್ಷಿ. ರಾಹುಲ್ ಗಾಂಧಿಯವರೇ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಲಿ, ನಿಮ್ಮವರೇ ನಿಮ್ಮನ್ನು ನಗೆಪಾಟಲಿಗೆ ಈಡುಮಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಇಕ್ಕಟ್ಟು
ಒಂದೆಡೆ ಪಕ್ಷದ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಇವಿಎಂ ಬೇಡ, ಬ್ಯಾಲೆಟ್ ಬೇಕು ಎಂದು ದೇಶಾದ್ಯಂತ ಚಳವಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕದ ಪ್ರಭಾವಿ ನಾಯಕ ಡಿ.ಕೆ. ಸುರೇಶ್ ಅವರು ಇವಿಎಂ ಸುರಕ್ಷಿತ, ಬ್ಯಾಲೆಟ್ ಬೇಡ ಎಂದು ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವನ್ನು ಜಗಜ್ಜಾಹೀರು ಮಾಡಿದೆ. ರಾಜ್ಯ ಚುನಾವಣಾ ಆಯೋಗ ನಡೆಸುವ ಚುನಾವಣೆಯಲ್ಲಿ ಇವಿಎಂ ಸುರಕ್ಷಿತ ಎಂದಾದರೆ, ಕೇಂದ್ರ ಚುನಾವಣಾ ಆಯೋಗ ನಡೆಸುವಾಗ ಮಾತ್ರ ಅದು ಹೇಗೆ ಅಸುರಕ್ಷಿತವಾಗುತ್ತದೆ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಈಗ ಕಾಂಗ್ರೆಸ್ ಮುಂದಿಟ್ಟಿದ್ದಾರೆ.








