ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಹೆಸರನ್ನು ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಅಧಿಕಾರ ಶಾಶ್ವತ ಎಂದು ಭಾವಿಸಿರುವ ಬಿಜೆಪಿಯ ಆಟ ಇನ್ನೆಷ್ಟು ದಿನ ನಡೆಯುತ್ತದೆ? ಜಗತ್ತಿನ ಇತಿಹಾಸದಲ್ಲಿ ಎಂತೆಂತಹ ಚಕ್ರವರ್ತಿಗಳೇ ಮೂಲೆಗುಂಪಾಗಿದ್ದಾರೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಐತಿಹಾಸಿಕ ಉದಾಹರಣೆಗಳ ಮೂಲಕ ವಿವರಿಸಿದರು.
ಅಧಿಕಾರ ಶಾಶ್ವತವಲ್ಲ ಎಂಬ ಎಚ್ಚರಿಕೆ
ಇಡೀ ಪ್ರಪಂಚದ ಮುಕ್ಕಾಲು ಭಾಗವನ್ನು ಗೆದ್ದಿದ್ದ ಅಲೆಕ್ಸಾಂಡರ್ ದಿ ಗ್ರೇಟ್ ಕೂಡ ಶಾಶ್ವತವಾಗಿ ಉಳಿಯಲಿಲ್ಲ. ಪ್ರಬಲ ನಾಯಕನಾಗಿದ್ದ ಸದ್ದಾಂ ಹುಸೇನ್ ಕೂಡ ತಮ್ಮ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇಂತಹ ಪ್ರಬಲರೇ ಕಾಲಗರ್ಭದಲ್ಲಿ ಕಣ್ಮರೆಯಾಗಿರುವಾಗ, ಇನ್ನು ಬೇರೆಯವರ ಲೆಕ್ಕವೇನು? ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಅಧಿಕಾರ ದರ್ಪದ ವಿರುದ್ಧ ಕಿಡಿಕಾರಿದರು. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು 101 ವರ್ಷಗಳಾಗಿವೆ. ಇಂತಹ ಸಂದರ್ಭದಲ್ಲಿ ಅವರ ಹೆಸರನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ, ಆದರೆ ಗಾಂಧಿ ಹೆಸರು ಶಾಶ್ವತ ಎಂದು ಪುನರುಚ್ಚರಿಸಿದರು.
ನರೇಗಾ ಹೆಸರು ಬದಲಾವಣೆ ವಿರುದ್ಧ ಜನಾಂದೋಲನ
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಹೆಸರು ಬದಲಾವಣೆ ಮತ್ತು ನಿಯಮಗಳಲ್ಲಿ ಮಾಡಿರುವ ಮಾರ್ಪಾಡುಗಳನ್ನು ವಿರೋಧಿಸಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಡಿಕೆಶಿ ಘೋಷಿಸಿದರು. ಮನರೇಗಾ ಹೆಸರು ಬದಲಾವಣೆಯನ್ನು ವಿರೋಧಿಸಿ 2026ರ ಜನವರಿ 5ನೇ ತಾರೀಕಿನಿಂದ ಪಂಚಾಯಿತಿ ಮಟ್ಟದಿಂದಲೇ ಹೊಸ ಹೋರಾಟವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ, ಬೆಸ್ಕಾಂ ಹಾಗೂ ಆರೋಗ್ಯ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ನಾಮನಿರ್ದೇಶನಗೊಂಡಿರುವ ಸುಮಾರು 150 ರಿಂದ 200 ಸದಸ್ಯರು ಈ ಹೋರಾಟದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಿ ಹೋರಾಟದ ಉಸ್ತುವಾರಿ ನೋಡಿಕೊಳ್ಳಲಾಗುವುದು ಎಂದರು.
ಕೇಂದ್ರದ ತಾರತಮ್ಯ ನೀತಿ ವಿರುದ್ಧ ಆಕ್ರೋಶ
ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಬಡವರಿಗೆ ಉದ್ಯೋಗ ನೀಡಲು ತಂದಿದ್ದ ಮನರೇಗಾ ಯೋಜನೆಯನ್ನು ಹತ್ಯೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಬರಗಾಲದ ಸಮಯದಲ್ಲಿ 150 ಮಾನವ ದಿನಗಳ ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ, ರಾಜ್ಯದಲ್ಲಿ ಬರವಿದ್ದಾಗ ಮತ್ತು ಕೋವಿಡ್ ಸಂದರ್ಭದಲ್ಲೂ ಕೇಂದ್ರ ನೆರವು ನೀಡಲಿಲ್ಲ. ಇದೀಗ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡುವ ಮೂಲಕ ಹೊಸ ಬದಲಾವಣೆ ತಂದಿದೆ. ಈ ಅವೈಜ್ಞಾನಿಕ ತಿದ್ದುಪಡಿಯನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಪಂಚಾಯಿತಿ ಚುನಾವಣೆಗೆ ಸಿದ್ಧತೆ
ಮುಂದಿನ ಎರಡು-ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಮೀಸಲಾತಿ ಕುರಿತಂತೆ ನ್ಯಾಯಾಲಯದಲ್ಲಿರುವ ಅಡೆತಡೆಗಳನ್ನು ನಿವಾರಿಸಿಕೊಂಡು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಭವನಗಳಿಗೆ ಅಡಿಪಾಯ
ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಅಧ್ಯಕ್ಷರುಗಳಿಗೆ ಸೂಚನೆ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಬೆಂಗಳೂರಿನಿಂದಲೇ ವರ್ಚುಯಲ್ ಆಗಿ ಈ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತಮ್ಮ ಕನಕಪುರ ಕ್ಷೇತ್ರದಲ್ಲಿ ನರೇಗಾ ಯೋಜನೆಯಡಿ 57 ಸಾವಿರ ರೈತ ಕುಟುಂಬಗಳಿಗೆ ದನದ ಕೊಟ್ಟಿಗೆ, ಕೋಳಿ ಸಾಕಾಣಿಕೆ ಶೆಡ್ ಹಾಗೂ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಸುಮಾರು 200 ಕೋಟಿಗೂ ಹೆಚ್ಚು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ನಾನು ಹಣ ಲೂಟಿ ಮಾಡಿರಬಹುದು ಎಂಬ ಅನುಮಾನದಿಂದ ಕೇಂದ್ರ ಸರ್ಕಾರ ಹತ್ತು ತನಿಖಾ ತಂಡಗಳನ್ನು ಕಳುಹಿಸಿತ್ತು. ಆದರೆ ಯಾವುದೇ ಲೋಪ ಸಿಗದೇ, ಕೊನೆಗೆ ಕೇಂದ್ರ ಸರ್ಕಾರವೇ ನಮ್ಮ ಪಂಚಾಯಿತಿಗೆ ಪ್ರಶಸ್ತಿ ನೀಡಬೇಕಾಯಿತು ಎಂದು ಸ್ಮರಿಸಿದರು.








