ಹುಬ್ಬಳ್ಳಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಅವರ ಮೇಲಿನ ಪ್ರಕರಣಗಳು ಇನ್ನೂ ಕ್ಲಿಯರ್ ಆಗಿಲ್ಲ ಎಂದು ಕುಟುಕಿದ್ದಾರೆ.
ಜಗದೀಶ್ ಶೆಟ್ಟರ್ ಅವರು ನಗರದಲ್ಲಿಂದು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೇರವೇರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಅವರ ಮೇಲಿನ ಪ್ರಕರಣಗಳು ಇನ್ನೂ ಕ್ಲಿಯರ್ ಆಗಿಲ್ಲ. ಜೈಲಿನಲ್ಲಿದ್ದು ಹೊರ ಬಂದವರಿಗೆ ಇನ್ನೊಬ್ಬರ ನೈತಿಕತೆಯ ಬಗ್ಗೆ ಮಾತಾಡುವ ಅಧಿಕಾರವಿಲ್ಲ ಎಂದು ಕುಟುಕಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಮನೆಯ ಮೇಲೆಯೇ ಗಲಭೆ ನಡೆದಿದೆ. ಆದರೆ ಈ ಘಟನೆಯನ್ನು ಕಾಂಗ್ರೆಸ್ ನಾಯಕರು ಯಾರೂ ಖಂಡಿಸಿಲ್ಲ. ಗೂಂಡಾಗಳ ಬೆನ್ನಿಗೆ ನಿಂತು ಪೊಲೀಸ್ ಆಯುಕ್ತರಿಗೆ ಧಮ್ಕಿ ಹಾಕಿದ್ದಾರೆ ಎಂದ ಶೆಟ್ಟರ್, ಕಾಂಗ್ರೆಸ್ನವರು ತುಷ್ಟೀಕರಣ ರಾಜಕೀಯದಿಂದ ದೇಶವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮೊದಲು ಬೆಂಗಳೂರು ಗಲಭೆ ಘಟನೆಯನ್ನು ಖಂಡಿಸುವ ಕೆಲಸ ಮಾಡಲಿ. ಗಲಭೆಕೋರರಿಗೆ ಜಮೀರ್ ಅಹ್ಮದ್ ಪರಿಹಾರಧನ ನೀಡಿದ್ದಾರೆ. ಜಮೀರ್ ಅವರ ನಡೆಯ ಬಗ್ಗೆ ಕಾಂಗ್ರೆಸ್ ನೀಲುವೇನು ಎಂದು ಪ್ರಶ್ನಿಸಿದರು.