ಟ್ರಬಲ್ ಶೂಟರ್ ಮಾಡಿದ್ರಾ ಮಾಸ್ಟರ್ ಪ್ಲ್ಯಾನ್.
ಕೆಪಿಸಿಸಿಯಲ್ಲಿ ಯಾರಿಗೆ ಗೇಟ್ ಪಾಸ್, ಯಾರಿಗೆ ಬಡ್ತಿ.
ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ, ನುಡಿದಂತೆ ನಡೆಯುತ್ತಾರಾ ಡಿಕೆಶಿ ?
ರಾಜ್ಯ ಕಾಂಗ್ರೆಸ್ ನಲ್ಲಿ ಕನಕಪುರ ಬಂಡೆಯ ಸದ್ದು ಶುರುವಾಗಿದೆ. ಅಧ್ಯಕ್ಷಗಿರಿ ಘೋಷಣೆ ಆಗಿದ್ದೆ ತಡ ಡಿಕೆ.ಶಿವಕುಮಾರ ಟೆಂಪಲ್ ರನ್ ಮಾಡಿದ್ದರು. ಅಲ್ಲದೆ ಕಾಂಗ್ರೆಸ್ ನ ಹಿರಿಯ, ಕಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪಣ ತೊಟ್ಟಿದ್ದಾರೆ. ಹಾಗಾಗಿ ಪಕ್ಷವನ್ನು ಬಲಗೊಳಿಸಲು ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೇ ಮೊದಲು ಪಕ್ಷವನ್ನು ಸಂಘಟಿಸಬೇಕು ಎಂಬುದು ಡಿಕೆಶಿ ಪ್ಲ್ಯಾನ್. ಪಕ್ಷವನ್ನು ಸಂಘಟಿಸಿಲು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ಜಿಲ್ಲಾಧ್ಯಕ್ಷರು ಮತ್ತು ಕೆಲ ಅಂಗ ಸಂಘಟನೆಗಳ ಅಧ್ಯಕ್ಷರು ನಿಷ್ಕ್ರಿಯವಾಗಿದ್ದಾರೆ. ಆದ್ದರಿಂದ ನಿಷ್ಕ್ರಿಯವಾಗಿರುವರಿಗೆ ಗೇಟ್ ಪಾಸ್ ನೀಡಲು ಡಿಕೆಶಿ ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಕೆಪಿಸಿಸಿಯನ್ನು ವಿಸರ್ಜಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲಿ 3 ತಿಂಗಳ ಕಾಲ ಕೆಪಿಸಿಸಿಗೆ ಪದಾಧಿಕಾರಿಗಳೆ ಇರಲಿಲ್ಲ. ಅಧ್ಯಕ್ಷ, ಕಾರ್ಯಧ್ಯಕ್ಷರು ಮಾತ್ರ ಕೆಲಸ ಮಾಡುತ್ತಿದ್ದರು. ಇದೀಗ ಕೆಪಿಸಿಸಿಯ ಸಾರಥ್ಯ ವಹಿಸಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಲು ಮುಂದಾಗಿದ್ದಾರೆ. ಆ ಮೂಲಕ ತಮ್ಮದೇ ಆದ ತಂಡವನ್ನು ರಚಿಸುವ ತಂತ್ರ ಮಾಡುತ್ತಿದ್ದಾರೆ
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ 23 ವಿಂಗ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ವಿಧ್ಯಾರ್ಥಿ ಘಟಕ, ಮಹಿಳಾ ಘಟಕ, ಯುವ ಘಟಕ ಹೊರತು ಪಡಿಸಿ, ಉಳಿದ ಬಹುತೇಕ ಘಟಕಗಳನ್ನು ವಿಸರ್ಜನೆ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಘಟಕ, ವಕೀಲರ ಘಟಕ, ಕಾರ್ಮಿಕ ಘಟಕ, ಎಸ್ಸಿ ಎಸ್ಟಿ ಘಟಕ, ಹಿಂದುಳಿದ ವರ್ಗದ ಘಟಕ ಸೇರಿದಂತೆ 18 ಘಟಕಗಳನ್ನು ಪುನಾರಚನೆ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಡಿಕೆಶಿ, ಘಟಕಗಳ ನಿಷ್ಕ್ರಿಯ ಅಧ್ಯಕ್ಷರಿಗಳಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರಿಗೆ ಬಡ್ತಿ ನೀಡುವ ಲಕ್ಷಣಗಳಿವೆ. ಆ ಮೂಲಕ ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.