ಚಿತ್ರದುರ್ಗ: ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕಚ್ಚಾಟ ಜೋರಾಗಿ ನಡೆದಿದ್ದು, ಡಿಸಿಎಂ ಡಿಕೆಶಿ ನಾಳೆಯೇ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಆರೋಪಿಸಿದ್ದಾರೆ.
ಕೊಳಾಳ್ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ಮಾತನಾಡಿದ ಅವರು, ಡಿಕೆಶಿಯೋ ಓಟ ನೋಡಿ, ಸಿದ್ದರಾಮಯ್ಯ ಅವರಿಗೆ ಅಧಿಕಾರದ ಭಯ ಶುರುವಾಗಿದೆ. ಹೀಗಾಗಿ ಅಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಸ್ಪರ್ಧೆ ನಡೆಯುತ್ತಿದ್ದು, ಅಧಿಕಾರದ ದಾಹ ಹೆಚ್ಚಾಗಿದೆ. ಇದು ರಾಜ್ಯದ ಹಿತ ಕಾಪಾಡುವಲ್ಲಿ ಯೋಗ್ಯವಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ನೀರು ತಮಿಳುನಾಡಿಗೆ ಹರಿಯುತ್ತಿದೆ. ಕೋಲಾರದಲ್ಲಿ ಖಡ್ಗ ಹಿಡಿದು ಟಿಪ್ಪು ಮೆರವಣಿಗೆ ಮಾಡುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವ ಮತ್ತು ದ್ವೇಷ ಭಾವನೆ ಹಬ್ಬಿಸುವ ಕೆಲಸಕ್ಕೆ ಸರ್ಕಾರದ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾದ್ಯಂತ 17 ತಂಡ ರಚಿಸಿಕೊಂಡು ಬರ ಅಧ್ಯಯನ ನಡೆಸುತ್ತಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಜೋಳ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಓರ್ವ ರೈತ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದು, ಆತನಿಗೆ 2 ಸಾವಿರ ರೂ. ಕೂಡ ಕೈಗೆ ಸಿಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಒದಗಿಸಬೇಕು ಎಂದು ಕಿಡಿಕಾರಿದ್ದಾರೆ.








