ಕೊರೋನ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 30 ರ ಸೋಮವಾರವೂ ಸಂಪೂರ್ಣ ಬಂದ್ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಕೊರೊನಾ ಹರಡದಂತೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು ಸೋಮವಾರವೂ ಬಂದ್ ಮುಂದುವರಿಯಲಿದೆ. ಆದರೆ ಮಾರ್ಚ್ 31ರ ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ 3 ಗಂಟೆಯವರೆಗೆ ದಿನಸಿ ಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಮಂಗಳವಾರ ದಿನಸಿ ಅಂಗಡಿ ತೆರೆಯಲಿದ್ದು, ಕುಟುಂಬದ ಒಬ್ಬ ಸದಸ್ಯರು ಮನೆಯಿಂದ ಹೊರಬಂದು ಸಾಮಗ್ರಿ ಖರೀದಿಸಲು ಅವಕಾಶವಿದೆ. ಈ ಸಂದರ್ಭದಲ್ಲಿ ದಿನಸಿ ಸಾಮಾಗ್ರಿಗಳಿಗೆ ಮಳಿಗೆಯವರು ನಿಗದಿಗಿಂತ ಅಧಿಕ ದರ ವಸೂಲಿ ಮಾಡುವುದು ಕಂಡುಬಂದರೆ ಅಂತಹ ಅಂಗಡಿಗಳ ಲೈಸನ್ಸ್ ಕ್ಯಾನ್ಸಲ್ ಮಾಡುವ ಎಚ್ಚರಿಕೆಯನ್ನು ಕೋಟ ಶ್ರೀನಿವಾಸ್ ಪೂಜಾರಿ ನೀಡಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ 2 ತಿಂಗಳ ಮುಂಗಡ ಪಡಿತರ ನೀಡಲು ಏಪ್ರಿಲ್ 2 ರಿಂದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ಪಡಿತರ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.








