ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆರಲು ಅಡ್ಡ ಕತ್ತರಿಯಲ್ಲಿ ಸಿಲುಕಿರುವ ಕರ್ನಾಟಕ ತಂಡ, ಟೂರ್ನಿಯ ೯ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಫೆಬ್ರವರಿ ೧೨ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಬರೋಡ ವಿರುದ್ಧದ ಪಂದ್ಯ, ಕರ್ನಾಟಕದ ಪಾಲಿಗೆ ಮಾಡು ಇಲ್ಲವೆ ಮಡಿಯಾಗಿದೆ. ಜಯ ದಾಖಲಿಸಿದರೆ ಕರ್ನಾಟಕ ತಂಡ ನಿರಾಯಾಸವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಇನಿಂಗ್ಸ್ ಮುನ್ನಡೆ ಅಥವಾ ಹಿನ್ನಡೆ ಗಳಿಸಿದರೂ ಇತರ ಪಂದ್ಯಗಳ ಫಲಿತಾಂಶದ ಮೇಲೆ ಭವಿಷ್ಯ ಅವಲಂಬಿಸಬೇಕಾಗುತ್ತದೆ.
ಎಲೈಟ್ ಎ ಮತ್ತು ಬಿ ಗುಂಪಿನಿಂದ ಅಗ್ರ ೫ ತಂಡಗಳು ೮ರ ಘಟ್ಟಕ್ಕೇರಲಿವೆ. ಆದರೆ, ಟೂರ್ನಿಯ ೮ ಸುತ್ತಿನ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದರೂ, ಯಾವುದೇ ತಂಡಕ್ಕೆ ನಾಕೌಟ್ ಸ್ಥಾನ ಖಚಿತವಾಗಿಲ್ಲ. ಬಲಿಷ್ಠ ತಂಡಗಳಾದ ಮುಂಬೈ ಹಾಗೂ ತಮಿಳುನಾಡು ತಮ್ಮ ಅಂತಿಮ ಪಂದ್ಯಕ್ಕೆ ಮುನ್ನವೇ ಟೂರ್ನಿಯಿಂದ ಹೊರಬಿದ್ದಿವೆ.
ತಂಡ ಇಂತಿದೆ : ಕರುಣ್ ನಾಯರ್ (ನಾಯಕ), ಸಮರ್ಥ್ ಆರ್. (ಉಪನಾಯಕ),ದೇವದತ್ ಪಡಿಕ್ಕಲ್, ದೇಗಾ ನಿಶ್ಚಲ್, ಪವನ್ ದೇಶ್‌ಪಾಂಡೆ, ಶರತ್ ಶ್ರೀನಿವಾಸ್ (ವಿಕೆ), ಶ್ರೇಯಸ್ ಗೋಪಾಲ್ , ಗೌತಮ್ ಕೆ. , ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೆವಿ, ಪ್ರಸಿಧ್ ಎಂ ಕೃಷ್ಣ, ಪ್ರವೀಣ್ ದೂಬೆ, ವಿ ಕೌಶಿಕ್, ರೋನಿತ್ ಮೋರೆ, ಶರತ್ ಬಿಆರ್ (ವಿಕೆ).