ಕಂಬಳ ಕ್ಷೇತ್ರದಲ್ಲಿ ಶ್ರೀನಿವಾಸ ಗೌಡ ಅವರು ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳ್ಳುತ್ತಿದ್ದಂತೆ ಕಂಬಳದ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.
ಕಂಬಳದಲ್ಲಿ ಸಾಧನೆ ಮಾಡಿದವರ ಹುಡುಕುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಮಂದಿ ಸಿಗುತ್ತಾರೆ. ಅವರ ಸಾಧನೆ ಕ್ರೀಡಾಭಿಮಾನಿಗಳನ್ನ ನಿಬ್ಬೆರಗಾಗುವಂತೆ ಮಾಡುತ್ತದೆ. ಹೀಗೆ ಸಾಧನೆ ಮಾಡಿದವರಲ್ಲಿ ಅಳದಂಗಡಿ ರವಿ ಕೂಡ ಒಬ್ಬರು.
ಕಂಬಳ ಓಟದಲ್ಲಿ ಅಳದಂಗಡಿ ರವಿ ಅವರ ಸಾಧನೆ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಯುವಕರನ್ನ ನಾಚಿಸುವಂತೆ ಮಾಡುತ್ತದೆ..
ಅಳದಂಗಡಿ ರವಿ ಕಂಬಳ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಅವರ ವಯಸ್ಸು 50 ರ ಗಡಿದಾಟಿದರೂ, ಎತ್ತುಗಳ ಹಿಡಿದು ಕೇಸರು ಗದ್ದೆಗೆ ಇಳಿದರು 20ರ ಚಿರಯುವಕನಂತಾಗುತ್ತದೆ. ಇಳಿವಯಸ್ಸಿನಲ್ಲೂ ಅವರ ಕಟ್ಟಮಸ್ತಾದ ಮೈಕಟ್ಟು ಯುವಕರನ್ನ ದಂಗುಬಡಿಸುತ್ತದೆ.
19 ನೇ ವಯಸ್ಸಿನಲ್ಲೇ ಕಂಬಳ ಕ್ಷೇತ್ರಕ್ಕೆ ಕಾಲಿಟ್ಟ ರವಿ, ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಇಲ್ಲಿಯವರೆಗೆ ಬರೋಬ್ಬರಿ 302 ಪದಕಗಳನ್ನು ಗಳಿಸಿದ್ದಾರೆ.
ಈ ಕಂಬಳ ವೀರನ ಬಾಡಿ ವರ್ಕೌಟ್ ಈಗಿನ ಜಿಮ್ ಗಳಿಗೆ ಸವಾಲಾಗಿದೆ. ರವಿ ಅವರ ಬಾಡಿ ವರ್ಕೌಟ್ ಪಕ್ಕಾ ದೇಶಿ ಶೈಲಿಯಲ್ಲಿದೆ. ರವಿ ಅವರು ದೇಹದಾರ್ಢ್ಯಗೆ ಕರಾವಳಿ ಆಹಾರ ಪದ್ಧತಿಯನ್ನ ಅನುಸಾರ ಮಾಡುತ್ತಿದ್ದಾರೆ. ಗಂಜಿ, ಚಟ್ನಿ,ಮೀನು,ಕೋಳಿ ತಿನ್ನುತ್ತಾರೆ.
ರವಿ ಅವರು ಕೇವಲ ಕಂಬಳ ಓಟಗಾರ ಮಾತ್ರರಲ್ಲದೇ ತಮ್ಮ ಮನೆಯಲ್ಲಿ ಏಳು ಕೋಣಗಳನ್ನು ಸಾಕಿ ಸಲಹುತ್ತಿದ್ದಾರೆ. ಅವರು ತಾವು ಸಾಕಿದ ಕೋಣಗಳನ್ನು ಕಂಬಳ ಕೂಟಕ್ಕೆ ಇಳಿಸಲು ತರಬೇತಿ ನೀಡುತ್ತಾರೆ. ಇನ್ನು ರವಿ ಅವರು ಜೀವನೋಪಯಕ್ಕಾಗಿ ಅಡಿಕೆ ಕೊಯ್ಲು ಹಾಗೂ ಇತರ ಕೂಲಿ ಕೆಲಸದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಪಾಶ್ಚಿಮಾತ್ಯ ಆಟಗಳ ಹಾವಳಿಯ ನಡುವೆ ಕಂಬಳ ಕಂಗೊಳಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.