ಧಾರವಾಡ: ಮಾವಿನ ಸೀಸನ್ ಆರಂಭವಾದರೆ ಸಾಕು ಎಲ್ಲರೂ ಹಣ್ಣು ಕೊಳ್ಳಲು ಮುಗಿ ಬೀಳುತ್ತಾರೆ. ಹೀಗಾಗಿಯೇ ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದೇ ಕರೆಯುತ್ತಾರೆ.
ಈಗ ಧಾರವಡಾದಲ್ಲಿ ವಿಶ್ವದಲ್ಲಿಯೇ ಅತೀ ದುಬಾರಿಯಾದ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದೆ. ಇಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಬಂದಿದೆ. ಧಾರವಾಡ ಮಾವಿನ ಮೇಳದಲ್ಲಿ ಪ್ರತಿ ಕಿಲೋ ಗೆ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆದಿದೆ.
ಇದು ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ (Miyazaki Mango) ತಳಿಯ ಮಾವನ್ನು ಪ್ರದರ್ಶನಕ್ಕಿಡಲಾಗಿದೆ. ಧಾರವಾಡ ನಗರದ ಪ್ರಮೋದ ಗಾಂವ್ಕರ್ ಎಂಬುವವರು ತಮ್ಮ ಕಲಕೇರಿ ಗ್ರಾಮದ ತೋಟದಲ್ಲಿ ಈ ಹಣ್ಣನ್ನು ಬೆಳೆದಿದ್ದಾರೆ.
ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ಕೆಜಿಗೆ ಮೀಯಾಝಾಕಿ ಹಣ್ಣಿಗೆ ಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣು ಸುಮಾರು 10 ಸಾವಿರ ರೂ. ಬೆಲೆ ಇದೆ.
ಮೀಯಾಝಾಕಿ ತಳಿ ಮೂಲತಃ ಜಪಾನಿನ (Japan) ತಳಿಯಾಗಿದೆ. ಉತ್ತಮ ಸುವಾಸನೆ ಮತ್ತು ಪೌಷ್ಟಿಕತೆಗೆ ಇದು ವಿದೇಶಗಳಲ್ಲಿ ಭಾರೀ ಬೇಡಿಕೆ ಹೊಂದಿದೆ. ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಜಪಾನಿನ ಮೀಯಾಝಾಕಿ ಎಂಬುವವರು ಇದನ್ನ ಮೊದಲು ಬೆಳೆದಿದ್ದಕ್ಕೆ ಈ ಮಾವಿಗೆ ಅವರ ಹೆಸರು ಇಡಲಾಗಿದೆ.
ಪ್ರಮೋದ್ ಗಾಂವ್ಕರ್ ಇದರ 2012 ರಲ್ಲಿ ತಮ್ಮ ತೋಟದಲ್ಲಿ ನೆಟ್ಟಿದ್ದರು. 2015 ರಿಂದ ಇಳುವರಿ ಆರಂಭವಾಗಿದ್ದು ಕಳೆದ ವರ್ಷ ಎರಡು ಮಾವಿನ ಮರಗಳಲ್ಲಿ ಕೇವಲ 15 ಮಾವು ಆಗಿದ್ದವು. ಈ ವರ್ಷ 4 ಮಾವು ಮಾತ್ರ ಆಗಿವೆ.