ಹೊಸದಿಲ್ಲಿ, ಮೇ 23 : ಒಂದೆಡೆ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಕೊರೊನಾ ವೈರಸ್ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ರೋಗಿಗಳಿಗೆ ಪುನಃ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ.
ಈ ಮೊದಲು ಹಲವು ದೇಶಗಳಲ್ಲಿ ಕೊರೊನಾ ರೋಗಿ ಚಿಕಿತ್ಸೆ ಪಡೆದು ಗುಣಮುಖನಾದ ಮೇಲೆಯೂ ಕೊರೊನಾ ಪರೀಕ್ಷಾ ವರದಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಈ ಕುರಿತು ಹಲವು ಸಂಶೋಧನೆಗಳನ್ನು ನಡೆಸಲಾಗಿದ್ದು, ಸಂಶೋಧಕರು ವಾರಗಳ ನಂತರ ರೋಗಿಯ ವರದಿಗಳಲ್ಲಿ ಪಾಸಿಟಿವ್ ಬಂದರೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಕೊರೊನಾ ರೋಗಿಗಳು ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಚಿಕಿತ್ಸೆಯ ನಂತರ ಕೊರೊನಾ ವರದಿಗಳಲ್ಲಿ ಪಾಸಿಟಿವ್ ಬರಲು ಕಾರಣ ಅವರ ದೇಹದಲ್ಲಿ ಇರುವ ಕೊರೋನಾ ವೈರಸ್‌ನ ಸತ್ತ ಕಣಗಳು. ಆದರೆ ಇದರಿಂದ ಯಾವುದೇ ಸೋಂಕಿನ ಅಪಾಯವಿರುವುದಿಲ್ಲ ಎಂದಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನಡೆಸಿರುವ ಈ ಅಧ್ಯಯನದಲ್ಲಿ 285 ರೋಗಿಗಳ ಮಾದರಿಗಳ ಸ್ಯಾಂಪಲ್ ಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಅದನ್ನು ಪ್ರಯೋಗಾಲಯದಲ್ಲಿ ವಿಕಸಿಸಲು ಯತ್ನಿಸಲಾಗಿದ್ದು, ಅದು ಬೆಳವಣಿಗೆಯ ಯಾವುದೇ ಗುಣ ಲಕ್ಷಣಗಳನ್ನು ತೋರಿಸಲಿಲ್ಲ. ಹಾಗಾಗಿ ಇದು ಸೋಂಕನ್ನು ಹರಡಲು ಸಾಧ್ಯವಿಲ್ಲ ಎಂಬುದು ತಿಳಿದು ಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದಕ್ಷಿಣ ಕೊರಿಯಾ ಗುಣಮುಖರಾದ ರೋಗಿಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕೊರೊನಾದಿಂದ ಗುಣಮುಖರಾದವರು ಶಾಲೆ ಅಥವಾ ಕಚೇರಿಗೆ ಸೇರುವ ಮೊದಲು ಕೊರೊನಾ ಪರೀಕ್ಷೆಯ ನಕಾರಾತ್ಮಕ ವರದಿಯನ್ನು ತೋರಿಸಬೇಕಾಗಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಕೂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ನಿಟ್ಟಿನಲ್ಲಿ ಕೊರೋನಾ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಾಂಕ್ರಾಮಿಕ ಕಾಯಿಲೆಗಳ ವಿಭಾಗದ ಮುಖ್ಯಸ್ಥ ಡಾ.ಆರ್.ಆರ್ ಗಂಗಖೇಡ್ಕರ್ ಅವರು ಚಿಕಿತ್ಸೆಯ ಬಳಿಕವೂ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬರಲು ಕಾರಣಗಳು ಏನು ಎಂಬ ಬಗ್ಗೆ ವಿವರಿಸಿದ್ದಾರೆ.
ಯಾವುದೇ ಓರ್ವ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು, 24 ಗಂಟೆಗಳ ಒಳಗಾಗಿ ಆ ರೋಗಿಯ ಎರಡು ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿಗಳು ನೆಗಟಿವ್ ಎಂದು ಬರಬೇಕು. ಆದರೆ, ಅನೇಕ ಬಾರಿ ರೋಗಿಗಳು ಗುಣಮುಖರಾಗಿದ್ದರೂ ಕೂಡ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿಗಳು ನೆಗಟಿವ್ ಎಂದು ಬರುವುದಿಲ್ಲ. ಇದರಿಂದ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸ ಬೇಕಾಗುತ್ತದೆ. ವೈರಸ್ ಹೊಂದಿರುವ ಗಂಟಲಿನ ಸ್ನಾಯುಗಳಲ್ಲಿ ಮೂರು ತಿಂಗಳವರೆಗೂ ಕೊರೊನಾ ವೈರಸ್ ಕಣಗಳು ಉಳಿಯಬಲ್ಲದು. ಅಂದರೆ ಕೊರೊನಾ ವೈರಸ್ ನಾಶವಾದ ಬಳಿಕವೂ ಗಂಟಲಿನ ಸ್ನಾಯುಗಳಲ್ಲಿ ಇರುವ ಕಾರಣ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬರದೆ ಇರಲು ಸಾಧ್ಯವಿದೆ ಎಂದು ಡಾ.ಆರ್.ಆರ್ ಗಂಗಖೇಡ್ಕರ್ ಅವರು ವಿವರಿಸಿದ್ದಾರೆ.
ಡಾ.ಆರ್.ಆರ್ ಗಂಗಖೇಡ್ಕರ್ ಅವರು ಗಂಟಲಿನ ಸ್ನಾಯುಗಳಲ್ಲಿ ಇರುವ ವೈರಸ್ ಕಣ ಜೀವಂತವಾಗಿದೆಯೇ ಅಥವಾ ಸಾವನ್ನಪ್ಪಿದೆಯೇ ಎಂದು ಹೇಗೆ ಗೊತ್ತಾಗುತ್ತದೆ ಎಂಬ ಪ್ರಶ್ನೆಗೆ, ಇದರ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಲಾಗಿದ್ದು, ಗುಣಮುಖನಾದ ರೋಗಿಯಲ್ಲಿ ಮೂರು ದಿನಗಳ ವರೆಗೆ ಸೋಂಕಿನ ಯಾವುದೇ ಗುಣಲಕ್ಷಣಗಳು ಕಾಣಿಸದಿದ್ದರೆ ಅವನ ಗಂಟಲಿನ ಮಾದರಿಯನ್ನು ತೆಗೆದು ವಿಕಸನ ಮಾಡಲಾಗುತ್ತದೆ. ವೈರಸ್ ತನ್ನ ಸಹಜ ಗುಣಧರ್ಮದಂತೆ ಹೆಚ್ಚು ವೈರಸ್ ಉತ್ಪಾದಿಸಿದರೆ ಅದು ಜೀವಂತವಾಗಿದೆ ಎಂದರ್ಥ, ಇಲ್ಲದಿದ್ದರೆ ಅದು ನಾಶವಾಗಿದ್ದು ಅದರಿಂದ ಸೋಂಕು ಹರಡುವ ಸಂಭವವಿಲ್ಲ ಎಂದು ವಿವರಿಸಿದ್ದಾರೆ.








