ವೈದ್ಯನ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ
ತೆಲಂಗಾಣ: ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ವೈದ್ಯೆ ಸಪ್ನಾ ಮೃತ ದುರ್ದೈವಿ. ಶ್ರೀಧರ್, ಉಸ್ಮಾನಿಯಾ ವೈದ್ಯಕೀಯ ಕಾಲೇಜ್ನಲ್ಲಿ ಎಂಡಿ ಆದ ಬಳಿಕ ಸಪ್ನಾ ಮತ್ತು ಅವರ ಪತಿ ಸೈದಾಬಾದ್ನ ವೆಂಕಟಾದ್ರಿ ನಗರದಲ್ಲಿ ವಾಸವಾಗಿದ್ದರು. ಈತ ಕಳೆದೊಂದು ವರ್ಷದಿಂದಲೂ ಹೆಂಡತಿಗೆ ವರದಕ್ಷಿಣೆ ವಿಚಾರವಾಗಿ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದರಿಂದ ಮನನೊಂದ ವೈದ್ಯೆ ಮಾರ್ಚ್ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ-ಪತ್ನಿ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಆದರೆ, ಗಂಡ ವರದಕ್ಷಿಣೆಗಾಗಿ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ನೊಂದ ಪತ್ನಿ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಲ್ಗೊಂಡದ ದಾಮರಚಾರ್ಲವಾಸಿ ನಿವಾಸಿ ಸಪ್ನಾ ಎಂಬವರು ಗಂಗನಪಲ್ಲಿಯ ವಿಶ್ವನಾಥ್ ಜೊತೆ ಮೊದಲ ಮದುವೆ ಮಾಡಿಕೊಂಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಉಂಟಾಗದ ಕಾರಣಕ್ಕಾಗಿ ಅನಿವಾರ್ಯವಾಗಿ ವಿಚ್ಛೇದನ ಪಡೆದುಕೊಂಡಿದ್ದರು. 2015ರ ಏಪ್ರಿಲ್ ತಿಂಗಳಲ್ಲಿ ಕರ್ನೂಲ್ನ ಡಾ.ಶ್ರೀಧರ್ ಜೊತೆ ಎರಡನೇ ಮದುವೆಯಾಗಿದ್ದಾರೆ. ಈ ವೇಳೆ ವರದಕ್ಷಿಣೆ ರೂಪದಲ್ಲಿ 10 ಲಕ್ಷ ರೂ. ನಗದು ಹಾಗೂ 14 ತೊಲ ಚಿನ್ನಾಭರಣ ನೀಡಲಾಗಿತ್ತು.
ಇಷ್ಟು ನೀಡಿದರು ಸಮಾಧಾನವಾಗದ ಪತಿ, ಪತ್ನಿ ಸಪ್ನಾಗೆ ಕಿರುಕುಳ ನೀಡಿದ್ದಾನೆ ಇದರಿಂದ ಬೇಸರಗೊಂಡ ಪತ್ನಿ ಆತ್ಮಹತ್ಯೆಗೆ ಯತ್ನಿಸಿದಾಗ ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಇದೇ ವಿಷಯವಾಗಿ ಪೊಲೀಸರಿಗೆ ಸಪ್ನಾ ತಂದೆ ದೂರು ಕೂಡಾ ನೀಡಿದ್ದು, ವರದಕ್ಷಿಣೆ ವಿಚಾರವಾಗಿ ಮೇಲಿಂದ ಮೇಲೆ ಮಗಳ ಮೇಲೆ ಒತ್ತಡ ಹಾಕುತ್ತಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಮಾರ್ಚ್ 8ರಂದು ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








