ಸೆಪ್ಟಂಬರ್ 15 ರಿಂದ ಆನ್‌ಲೈನ್ ಸಹಿತ ಎಲ್ಲಾ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ ವೈದ್ಯರು
ಬೆಂಗಳೂರು, ಸೆಪ್ಟೆಂಬರ್13: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಮತ್ತು ಸರ್ಕಾರದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ.
ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ವೇತನ ಪರಿಷ್ಕರಣೆಗೆ ಸರ್ಕಾರವನ್ನು ಒತ್ತಾಯಿಸಿ ಸೆಪ್ಟಂಬರ್ 15 ರಿಂದ ಎಲ್ಲಾ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಂದು ವಾರದ ಗಡು ನೀಡಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಕಾರಣದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ನೇತೃತ್ವದಲ್ಲಿ ವೈದ್ಯರು ಶನಿವಾರ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಆನ್‌ಲೈನ್ ಸಹಿತ ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದು, ಸರ್ಕಾರಕ್ಕೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಯಾವುದೇ ವರದಿಯನ್ನು ಸಲ್ಲಿಸದಿರಲು ನಿರ್ಧರಿಸಲಾಗಿದೆ. ಆದರೆ ವೈದ್ಯಾಧಿಕಾರಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, ಎಲ್ಲಾ ರೀತಿಯ ವೈದ್ಯಕೀಯ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.








