ವಾಷಿಂಗ್ಟನ್ ; ಚೀನಾದ ವಾಣಿಜ್ಯ ಸಮರ ಮತ್ತು ಕೊರೊನಾ ವೈರಸ್ ವಿಚಾರವಾಗಿ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಮ್ಯೂನಿಸ್ಟ್ ದೇಶ ಚೀನಾ ಜೊತೆ ಯಾವುದೇ ಕಾರಣಕ್ಕೂ ಮತ್ತೆ ವಾಣಿಜ್ಯ ವಹಿವಾಟು ನಡೆಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಶ್ವೇತಭವನದ ರೋಸ್ ಗಾರ್ಡನ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಚೀನಾ ಜೊತೆ ಮತ್ತೆ ವಾಣಿಜ್ಯ ಸಂಬಂಧ ಕುದುರಿಸುವ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಇದೇ ವೇಳೆ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ ಟ್ರಂಪ್, ಅಮೆರಿಕ ಮತ್ತು ಚೀನಾ ನಡುವೆ ಭುಗಿಲೆದ್ದ ವಾಣಿಜ್ಯ ಸಮರವನ್ನು ಶಮನಗೊಳಿಸಲು ಈ ವರ್ಷಾರಂಭದಲ್ಲಿ ವಾಷಿಂಗ್ಟನ್ ಸಲ್ಲಿಸಿದ್ದ ದ್ವಿಪಕ್ಷೀಯ ಒಪ್ಪಂದ ಪ್ರಸ್ತಾವನೆಯನ್ನು ಬೀಜಿಂಗ್ ಗೌರವಿಸಿಲ್ಲ. ಇದಕ್ಕಾಗಿ ಆ ದೇಶವು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಇನ್ನು ಅಮೆರಿಕದಲ್ಲಿ ಕೊರೊನಾ ರೋಗ ತಡೆಗಾಗಿ ಸಾರ್ವಜನಿಕರಿಗೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಈ ವಾರದಲ್ಲಿ ಆರೋಗ್ಯ ತಪಾಸಣೆಗೆ ಒಳಪಟ್ಟವರ ಸಂಖ್ಯೆ 1 ಕೋಟಿ ದಾಟಲಿದೆ ಎಂದು ಟ್ರಂಪ್ ಹೇಳಿದ್ದಾರೆ.








