ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ – ಕೊರೊನಾ ಗೆದ್ದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾತು
ಮಂಗಳೂರು, ಜುಲೈ 25: ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ಯಾವ ಕಾಯಿಲೆಯೂ ಏನೂ ಮಾಡಲು ಸಾಧ್ಯವಿಲ್ಲ, ಅದೇ ರೀತಿ ಕೊರೊನಾಗೂ ರೋಗ ನಿರೋಧಕ ಶಕ್ತಿಯೇ ರಾಮಬಾಣ. ಕೊರೊನಾದಿಂದ ದೂರವಿರಲು ಪೌಷ್ಟಿಕ ಆಹಾರ ಸೇವಿಸಿ.ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದಂತೆ ನಿಮಗೆ ಬರುವ ಕಾಯಿಲೆಗಳು ಕೂಡ ದೂರವಾಗುತ್ತದೆ. ಒಂದು ವೇಳೆ ಬಂದರೂ ಬೇಗನೆ ಗುಣಮುಖರಾಗಲು ಸಾಧ್ಯವಿದೆ – ಇದು ತಮ್ಮ ಇಳಿವಯಸ್ಸಿನಲ್ಲಿ ಕೊರೊನಾ ವಿರುದ್ಧ ಗೆದ್ದು ಬಂದಿರುವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರ ಮಾತು.
ಇತ್ತೀಚೆಗಷ್ಟೇ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಯಗಳಿಸಿರುವ ಮಂಗಳೂರಿನ ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಕೊರೊನಾ ಸೋಂಕಿನ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಅನಗತ್ಯ ಭಯ ಬೇಡ ಎಂದಿರುವ ಪೂಜಾರಿಯವರು ಕೊರೊನಾವನ್ನು ಸಾಮಾನ್ಯ ಕಾಯಿಲೆ ಎಂದು ಭಾವಿಸಿ ಚಿಕಿತ್ಸೆ ಪಡೆಯಿರಿ. ಇದರಿಂದ ಒಂದೆರಡು ದಿನಗಳಲ್ಲಿ ಗುಣಮುಖರಾಗಬಹುದು ಎಂದು ಧೈರ್ಯ ತುಂಬಿದ್ದಾರೆ. ಮನೋಸ್ಥೈರ್ಯ ಹೆಚ್ಚಿಸಿಕೊಂಡು ಧನಾತ್ಮಕವಾಗಿ ಯೋಚಿಸಿದರೆ ಅರ್ಧ ರೋಗ ಅಲ್ಲೇ ದೂರವಾಗುತ್ತದೆ ಎಂದಿರುವ ಮಾಜಿ ಸಚಿವರು ಇಂತಹ ಕಾಯಿಲೆ ಹಿಂದೆಯೂ ಬಂದಿತ್ತು ಮತ್ತು ಮುಂದೆಯೂ ಬರಬಹುದು. ಹಾಗಾಗಿ ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ ಎಂದಿದ್ದಾರೆ.
ಕೊರೋನಾ ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗ ಬೇಕು ಎಂದಿರುವ ಜನಾರ್ದನ ಪೂಜಾರಿಯವರು ಇತರರು ರೋಗಿಯಲ್ಲಿ ಭಯವನ್ನು ಹುಟ್ಟಿಸಬಾರದು ಎಂದಿದ್ದಾರೆ.
ನಿಮ್ಮ ಸುರಕ್ಷತೆಗೆ ಪ್ರಾಮುಖ್ಯತೆ ಕೊಡಿ ಎಂದು ಜನತೆಗೆ ಕರೆಕೊಟ್ಟಿರುವ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರು ಸರ್ಕಾರ ಸೂಚಿಸಿರುವ ಮಾರ್ಗಸೂಚಿಯಂತೆ ಮನೆಯಿಂದ ಅನಗತ್ಯವಾಗಿ ಹೊರಗೆ ಹೋಗಬೇಡಿ. ಹೊರಗೆ ಹೋಗಲೇಬೇಕಾದ ಸಂದರ್ಭ ಬಂದಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೊರೊನಾದಿಂದ ದೂರವಿರಿ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಭಯಭೀತರಾಗದೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.