ಒಂದು ವಾರದವರೆಗೆ ಬೆಂಗಳೂರಿಗೆ ಬರಬೇಡಿ – ಭಾಸ್ಕರ್ ರಾವ್
ಬೆಂಗಳೂರು, ಜುಲೈ 15: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಲಾಕ್ ಡೌನ್ ಕುರಿತಂತೆ ಮಾತನಾಡಿದ್ದು, ಲಾಕ್ ಡೌನ್ ಅವಧಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿರಲಿದ್ದು, ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಅಗತ್ಯ ಸೇವೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಲ್ಲಾ ಕಡೆ ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಯಾವುದೇ ಪಾಸ್ ಸೌಲಭ್ಯಗಳು ಇರುವುದಿಲ್ಲ. ಲಾಕ್ ಡೌನ್ ಟೈಮ್ ನಲ್ಲಿ ಪೊಲೀಸರಿಗೆ ದೂರನ್ನು ನೀಡಬೇಕಾದಲ್ಲಿ ಆನ್ ಲೈನ್ ಮುಖಾಂತರ ಸಲ್ಲಿಸಬಹುದು ಮತ್ತು ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಅನಗತ್ಯವಾಗಿ ವಾಹನಗಳು ಓಡಾಡಿದರೆ, ಸೀಜ್ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕಾಗಿದ್ದು, ಎಲ್ಲರೂ ಒಂದು ವಾರದ ಲಾಕ್ ಡೌನ್ ಗೆ ಬೆಂಬಲ ನೀಡಬೇಕು. ಯಾರೂ ಕೂಡ ಒಂದು ವಾರದವರೆಗೆ ಬೆಂಗಳೂರಿಗೆ ಬರಬೇಡಿ.
ಚೆಕ್ ಪೋಸ್ಟ್ ಬಳಿ ವಾದ ಮಾಡಿದರೂ ನಾವು ಬಿಡುವುದಿಲ್ಲ. ಈಗಾಗಲೇ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಸೂಚನೆ ನೀಡಿದ್ದೇನೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.








