ಹೊಸದಿಲ್ಲಿ, ಮೇ 24 : ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು, ಭಾರತದಲ್ಲಿ ಕೊರೊನಾ ಸೋಂಕಿನ ಬಗ್ಗೆ ಭಯ ಪಡಬೇಕಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ನಮಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗಿರುವ ಪ್ರಮಾಣ ಹೆಚ್ಚಿದೆ. ಆದ್ದರಿಂದ ಸೋಂಕು ತಗುಲಿದವರು ಗಾಬರಿ ಪಡುವ ಅಗತ್ಯವಿಲ್ಲ ಎಂದು ದೇಶದ ಜನರಿಗೆ ಧೈರ್ಯ ಹೇಳಿದ್ದಾರೆ.
ಜಗತ್ತಿನಾದ್ಯಂತ ಬಾಧಿಸುತ್ತಿರುವ ಕೊರೋನಾ ಸೋಂಕಿನ ಹಾವಳಿ ಭಾರತದಲ್ಲೂ ಇದೆ. ಆದರೆ ಇದಕ್ಕಾಗಿ ಜನ ಗಾಬರಿ ಪಡಬೇಕಿಲ್ಲ. ಕಳೆದ ಹಲವು ವಾರಗಳಿಂದ ಕೇಂದ್ರ ಸರ್ಕಾರ ಇದನ್ನು ಹೇಳುತ್ತಿದೆ. ಆದರೆ ಧೈರ್ಯದಿಂದ ಇರಿ ಎಂದರೆ ನಮ್ಮಿಷ್ಟದಂತೆ ಇರುತ್ತೇವೆ ಎಂದರ್ಥವಲ್ಲ. ಕೆಲವು ವಿಷಯಗಳಲ್ಲಿ ನಾವು ಎಚ್ಚರಿಕೆ ವಹಿಸಲೇ ಬೇಕು. ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಎರಡು ಗಜದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈಗಳನ್ನು ತೊಳೆಯುತ್ತಿರುವುದು, ಮೂಗು ಬಾಯಿ ಆಗಾಗ ಮುಟ್ಟದೇ ಇರುವುದು ಇತ್ಯಾದಿ ನಿಯಮಗಳನ್ನು ಪಾಲಿಸಿದರೆ ಸೋಂಕು ತಗುಲುವುದನ್ನು ತಡೆಗಟ್ಟುವುದು ಸುಲಭ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ
ಕೊರೋನಾ ವೈರಸ್ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಕೊರೊನಾ ಚಿಕಿತ್ಸೆಗೆ ಲಸಿಕೆಯನ್ನು ಕಂಡು ಹಿಡಿಯಲಾಗುತ್ತಿದ್ದು, ಅದು ಅಂತಿಮ ಘಟ್ಟದಲ್ಲಿದೆ. ಆದರೂ ಜನ ಜಾಗೃತಿಯೂ ಈ ಹಂತದಲ್ಲಿ ತುಂಬ ನೆರವಾಗಲಿದೆ ಎಂದು ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಲಾಕ್ ಡೌನ್ ಸಡಿಲಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೋನಾ ವೈರಸ್ ಹರಡುವ ವೇಗ ಹೆಚ್ಚಾಗಿದೆ. ಆದರೆ ಇದರಿಂದ ಗಾಬರಿ ಪಡಬೇಕಾಗಿಲ್ಲ. ಭಾರತದಲ್ಲಿ ಇದರ ತೀವ್ರತೆಯ ಅರಿವು ಈಗಾಗಲೇ ನಮಗಾಗಿದೆ. 130 ಕೋಟಿ ಜನರಲ್ಲಿ ಇದುವರೆಗೆ 3500 ಜನ ಮಾತ್ರ ಸಾವನ್ನಪ್ಪಿದ್ದಾರೆ. ಇದರರ್ಥ ಕೊರೊನಾ ವೈರಾಣುವಿನ ತೀವ್ರತೆ ಆತಂಕ ಹುಟ್ಟಿಸುವಷ್ಟು ಭೀಕರವಾಗಿಲ್ಲ ಎಂದು ಹರ್ಷವರ್ಧನ್ ವಿವರಿಸಿದ್ದಾರೆ.
ಶತಮಾನಗಳಿಂದ ಈ ಜಗತ್ತು ಸಿಡುಬು ಮತ್ತು ಪೊಲಿಯೋದಂತಹ ಅನೇಕ ರೀತಿಯ ವೈರಾಣುಗಳ ಹಾವಳಿಯನ್ನು ಎದುರಿಸಿದೆ ಮತ್ತು ಇಂದು ಅವು ಹೇಳ ಹೆಸರಿಲ್ಲದೆ ಮಾಯವಾಗಿದೆ. ಆದರೆ ಕೊರೊನಾ ವೈರಸ್ ವಾತಾವರಣ ಮತ್ತು ಪ್ರದೇಶಕ್ಕೆ ತಕ್ಕಂತೆ ತನ್ನ ವರ್ತನೆಯನ್ನು ಬದಲಿಸುತ್ತಿದ್ದು, ಸದ್ಯ ಈ ವೈರಸ್ಸಿನ ಜತೆಯಲ್ಲಿ ಬದುಕುವುದನ್ನು ಕಲಿಯಬೇಕಿದೆ ಎಂದರು. ಕೊರೋನಾದಿಂದ ಉಂಟಾಗಿರುವ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಡಾ.ಹರ್ಷವರ್ಧನ್ ಅವರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.