ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನ ತಡೆಯುವ ಹಾಗೂ ಜನರ ಓಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಜಾರಿಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಕುರಿತು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ತುರ್ತು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ರಾವ್.. ಬೆಂಗಳೂರು ಸೀಲ್ ಡೌನ್ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಾರ್ವಜನಿಕರು ಭಯಬೀಳಬೇಡಿ, ಮುಂಜಾಗೃತಾ ಕ್ರಮವಾಗಿ ಎರಡೇ ವಾರ್ಡ್ ಗಳಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಲ್ಲಿಯೂ ಸೀಲ್ ಡೌನ್ ಮಾಡುವುದಿಲ್ಲ. ಈಗ ಸೀಲ್ ಡೌನ್ ಮಾಡಿರುವ ಜಾಗದಲ್ಲಿ ಸರ್ಕಾರ ಅಗತ್ಯ ವಸ್ತುಗಳನ್ನು ಪೂರೈಸಲಿದೆ. ಎರಡು ವಾರ್ಡ್ ಗಳಲ್ಲಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿದೆ. ಹಾಗಂತ ಇಡೀ ಬೆಂಗಳೂರು ಸೀಲ್ ಡೌನ್ ಆಗಿಲ್ಲ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಎಲ್ಲಾ ಕಡೆ ಅಗತ್ಯ ವಸ್ತಗಳಾದ ದಿನಸಿ, ಮಾಂಸ, ಮೆಡಿಕಲ್ಸ್ , ತರಕಾರಿ ಅಂಗಡಿಗಳು ಓಪನ್ ಇರುತ್ತವೆ, ಸಾವಿಗೆ ಹೋಗುವವರಿಗೆ ಮಾತ್ರ ಪಾಸ್ ಕೊಡ್ತೇವೆ. ಸಿಟಿಯಿಂದ ಹೊರಗೆ ಮತ್ತು ಒಳಗೆ ಬರುವವರ ತಪಸಾಣೆ ಆಗ್ತಿದೆ. ಮತ್ತೆ ಮತ್ತೆ ಹೇಳ್ತೀನಿ, ಬೆಂಗಳೂರಲ್ಲಿ ಸೀಲ್ ಡೌನ್ ಇಲ್ಲ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.