ಬೆಂಗಳೂರು : ಹಲವು ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಮೈಸೂರು ಭಾಗದಲ್ಲಿ ಕೊರೊನಾ ಮೂರನೇ ಹಂತಕ್ಕೆ ಕಾಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರು ಡಿಸಿ ಜೊತೆ ಚರ್ಚೆ ನಡೆಸಿ ಖಡಕ್ ಸೂಚನೆ ನೀಡಿದ್ದಾರೆ.
ದೂರವಾಣಿ ಮೂಲಕ ಮೈಸೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿರುವ ಸಿದ್ದರಾಮಯ್ಯ, ಕೇರಳದಿಂದ ಕರ್ನಾಟಕದ ಗಡಿಯೊಳಗೆ ಯಾರನ್ನೂ ಬಿಡಬೇಡಿ. ಕೇರಳದಿಂದ ಕೊರೊನಾ ಪಾಸಿಟಿವ್ ಇರುವವರು ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಬಂದಿದೆ. ಅದರಲ್ಲೂ ಕೇರಳದಿಂದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಕಡೆ ಹೆಚ್ಚಾಗಿ ಬರುತ್ತಿದ್ದಾರೆ. ಹೀಗಾಗಿ ಅವರನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.








