ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದಿಂದ ಜನರು ತಮ್ಮ ತಮ್ಮ ಊರುಗಳತ್ತ ಹೊರಟಿದ್ದಾರೆ. ಈ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಹೀಗಾಗಿ ಯಾರೂ ಊರು ಖಾಲಿ ಮಾಡಬಾರದು ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಜಗತ್ತಿನೆಲ್ಲಡೆ ಹರಡಿದೆ. ಎಲ್ಲರೂ ಕೊರೊನಾ ಜೊತೆಯಲ್ಲೇ ಬದುಕುವ ಸ್ಥಿತಿ ಬಂದಿದೆ. ಹೀಗಾಗಿ ಇದಕ್ಕೆ ಯಾರೂ ಭಯ ಪಡಬೇಕಿಲ್ಲ. ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಯಾರೂ ಊರು ಖಾಲಿ ಮಾಡಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾಗೆ ಹೆದರಿ ಓಡಿ ಹೋಬಾರದು, ಜಗತ್ತಿಲ್ಲಿ ಎಲ್ಲಿಯೂ ಈ ರೋಗ ಬಿಟ್ಟಿಲ್ಲ. ಎಲ್ಲೆಡೆ ವೈರಸ್ ಹರಡುತ್ತಿದೆ. ಹೀಗಾಗಿ ಓಡಿ ಹೋಗಿ ಎಲ್ಲಾದರೂ ತಪ್ಪಿಸಿಕೊಳ್ಳುತ್ತೇನೆ ಎನ್ನುವಂಥ ರೋಗ ಇದಲ್ಲ ಎಂದ ಕಾರಜೋಳ, ಸರ್ಕಾರದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ಎಲ್ಲರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಬೇಕು. ಈ ಮೂಲಕ ಗುಣಮುಖರಾಗಬೇಕು ಎಂದರು.








