ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ವಿಚಾರವಾಗಿ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಕಸ ವಿಲೇವಾರಿ ಘಟಕಗಳಿಗೆ ಹಾಗೂ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಶಾಸಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೇರಾನೇರ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಂಗೆ ತೆರಳುವ ಮುನ್ನ ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿಗೆ ಅಡ್ಡಿಪಡಿಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿದರು.
ಕಸವನ್ನೇ ತೆಗೆಸುವುದಿಲ್ಲ ಎಂಬ ಖಡಕ್ ಎಚ್ಚರಿಕೆ
ಬಿಜೆಪಿ ನಾಯಕರುಗಳು ಕಸ ವಿಲೇವಾರಿಗೆ ಅಡ್ಡಿ ಮಾಡುವುದನ್ನು ಬಿಡಲಿ. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ ಮತ್ತು ತೆಗೆಸುವುದೂ ಇಲ್ಲ. ಆಗ ಊರಿನ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ನಾನೇ ಈ ಬಗ್ಗೆ ಪ್ರಚಾರ ಮಾಡಿಸುತ್ತೇನೆ ಎಂದು ಡಿಸಿಎಂ ಆಕ್ರೋಶಭರಿತರಾಗಿ ನುಡಿದರು.
ಕಾಲನ್ನು ಕಟ್ಟಿಕೊಳ್ಳಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇಬೇಕು. ಕಸ ಯಾರದ್ದು? ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಹಾಗೂ ನಮ್ಮ ಸಮಯದಲ್ಲೂ ತೀರ್ಮಾನ ಮಾಡಿದ್ದು ಇದೇ ರೀತಿ ಎಂದು ಸಮರ್ಥಿಸಿಕೊಂಡರು.
ಅಭಿವೃದ್ಧಿಗೆ ಹಣ ನೀಡಿದ್ದೇವೆ, ಸಹಕಾರ ಕೊಡಿ
ನಾವು ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಸಾವಿರಾರು ಕೋಟಿ ಹಣವನ್ನು ಎಷ್ಟು ಅಂತ ಕೊಡಲು ಆಗುತ್ತದೆ? ಆದರೂ 20 ಕೋಟಿ, 30 ಕೋಟಿ ಸೇರಿದಂತೆ 50 ರಿಂದ 100 ಕೋಟಿ ರೂಪಾಯಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ನಾವು ಹಣ ಕೊಡುತ್ತೇವೆ, ಆದರೆ ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವೇನಾದರೂ ಅಲ್ಲಿ ಮೂರು ದಿನ ಕಸ ತೆಗೆಯಬೇಡಿ ಎಂದು ಆದೇಶಿಸಿದರೆ ಪರಿಸ್ಥಿತಿ ಏನಾಗಬಹುದು ಎಂದು ಎಚ್ಚರಿಸಿದರು.
ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ
ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮ ಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.








