ಬೆಂಗಳೂರು : ಕೊರೊನಾದಿಂದ ಹಣಕಾಸಿನ ತೊಂದರೆಯಾದರೂ ಪರವಾಗಿಲ್ಲ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಯೋಜನೆ ಸ್ಥಗಿತಗೊಳಿಸದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇಂದು ಸಿಎಂ ಬಿಎಸ್ ವೈ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಸಿಎಂ, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಸಭೆಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೊರೊನಾದಿಂದ ಶಿಕ್ಷಣ ಇಲಾಖೆ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳು, ತರಗತಿಗಳನ್ನು ನಡೆಸುವುದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ನಂತರ ತರಗತಿಗಳು, ಶಾಲೆಗಳು ಹೇಗಿರಬೇಕು ಎಂಬ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಜೂನ್ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸಿಎಂಗೆ ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ 25 ವಿದ್ಯಾರ್ಥಿಗಳ ಬದಲಾಗಿ 18 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಈ ಬಾರಿ 8 ಸಾವಿರ ಹೆಚ್ಚುವರಿ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷಾ ಕೊಠಡಿಗಳ ಫ್ಯೂಮಿಗೇಷನ್ ಮತ್ತು ಸ್ಯಾನಿಟೈಸೇಷನ್ ಮಾಡಲು ಕ್ರಮ ವಹಿಸಲಾಗುತ್ತಿದೆ.
ವಲಸೆ ಕಾರ್ಮಿಕರ ಮಕ್ಕಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ತಮ್ಮ ಊರಿನಲ್ಲಿಯೇ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.