ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ಕುರಿತು ತಾವು ನೀಡಿದ್ದ ಸಾಮಾನ್ಯ ಹೇಳಿಕೆಯನ್ನು ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ತಿರುಚಿ, ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವ ನನ್ನ ಮಾತುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ನಾನು ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ಪಕ್ಷವನ್ನು ಗುರಿಯಾಗಿಸಿ ಟೀಕೆ ಮಾಡಿಲ್ಲ. ನನ್ನ ಹೇಳಿಕೆಯನ್ನು ದಯವಿಟ್ಟು ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಅಸ್ತ್ರವಾಗಿ ಬಳಸಿಕೊಳ್ಳಬೇಡಿ ಎಂದು ರಾಜಕಾರಣಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಎಲ್ಲಾ ಸರ್ಕಾರಗಳೂ ಹೊಣೆ
ಭ್ರಷ್ಟಾಚಾರ ಎಂಬುದು ಕೇವಲ ಪ್ರಸ್ತುತ ಅಥವಾ ಹಿಂದಿನ ಒಂದು ಸರ್ಕಾರಕ್ಕೆ ಸೀಮಿತವಾದ ವಿಷಯವಲ್ಲ. ಎಲ್ಲಾ ಸರ್ಕಾರಗಳ ಆಡಳಿತಾವಧಿಯಲ್ಲೂ ಭ್ರಷ್ಟಾಚಾರವಿದ್ದೇ ಇದೆ. ವ್ಯವಸ್ಥೆಯಲ್ಲಿ ಬೇರೂರಿರುವ ಈ ಸಮಸ್ಯೆಯ ಬಗ್ಗೆ ನಾನು ಕಳವಳ ವ್ಯಕ್ತಪಡಿಸಿದ್ದೆನೇ ಹೊರತು, ಯಾರನ್ನೂ ವೈಯಕ್ತಿಕವಾಗಿ ಅಥವಾ ರಾಜಕೀಯವಾಗಿ ಟೀಕಿಸುವ ಉದ್ದೇಶ ನನಗಿಲ್ಲ. ನಾನು ಮಾತನಾಡುವಾಗ ಯಾವ ಸರ್ಕಾರ ಎಂದು ಹೆಸರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇವಲ ಆಡಳಿತ ನಡೆಸುವವರನ್ನು ಮಾತ್ರ ದೋಷಿಗಳನ್ನಾಗಿ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಹೆಮ್ಮರವಾಗಲು ಸಮಾಜ ಹಾಗೂ ಜನಸಾಮಾನ್ಯರೂ ಕೂಡ ಕಾರಣರಾಗಿದ್ದಾರೆ. ನಾವು ನೀಡುವ ಅವಕಾಶಗಳೇ ಭ್ರಷ್ಟಾಚಾರಕ್ಕೆ ನೀರೆರೆಯುತ್ತವೆ. ಈ ಸತ್ಯವನ್ನು ಅರಿತುಕೊಳ್ಳುವ ಬದಲು, ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯ ಕೆಸರೆರಚಾಟಕ್ಕೆ ಬಳಸುತ್ತಿರುವುದು ವಿಷಾದನೀಯ ಎಂದು ನ್ಯಾ.ವೀರಪ್ಪ ಕಿಡಿಕಾರಿದ್ದಾರೆ.
ಭಾರತದ ಯಾವ ಯಾವ ರಾಜ್ಯಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ನಡೆದಿದ್ದ ಸರ್ವೆಯೊಂದರ ಸಂದರ್ಭದಲ್ಲಿ ನಾನು ಮಾತನಾಡಿದ್ದೆ. ಆ ಸಮೀಕ್ಷೆಯ ಅಂಕಿಅಂಶಗಳ ಆಧಾರದ ಮೇಲೆ ಸಾಮಾನ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಆದರೆ, ಇದನ್ನು ಕೆಲವು ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು, ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನಾದರೂ ರಾಜಕಾರಣಿಗಳು ಇಂತಹ ನಡೆವಳಿಕೆಯನ್ನು ನಿಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ಮನವಿ ಮಾಡಿದರು.








