ಬೆಳಗಾವಿ : ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ ಎಂದು ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇಂದು ಸಚಿವರು ಮಾಂಜರಿ ಹಾಗೂ ಯಡೂರ ಗ್ರಾಮಗಳಲ್ಲಿ ಕೃಷ್ಣಾ ನದಿಯಲ್ಲಿ ಬೋಟ್ ಮೂಲಕ ಒಳಹರಿವಿನ ಕುರಿತು ಅವಲೋಕನ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇನ್ನು ಮಹಾರಾಷ್ಟ್ರ ಕೋಯ್ನಾ ಜಲಾಶಯವು ಶೇ 68 ರಷ್ಟು ಭರ್ತಿಯಾಗಿದೆ. ಎರಡು ಅಥವಾ ಮೂರು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ ಎಂದ ಸಚಿವರು, ಭಗವಂತನ ಕೃಪೆಯಿಂದ ಮಳೆ ಬಿಡುವು ನೀಡಿದರೇ ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಕಡಿಮೆಯಾಗಬಹುದು. ಆಗ ಕೋಯ್ನಾ ಜಲಾಶಯದಿಂದ ನೀರಿ ಬಿಡುಗಡೆ ಮಾಡಿದರೂ ಪ್ರವಾಹ ಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ಉತ್ತಮ ಪಾಟೀಲ, ರವೀಂದ್ರ ಮಿರ್ಜೆ, ಅಜೀತ ದೇಸಾಯಿ, ಮುದ್ದಸರ ಜಮಾದಾರ, ಅನಿಲ ಪಾಟೀಲ. ತಹಶಿಲ್ದಾರ ಸುಭಾಷ್ ಸಂಪಗಾವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ ಮುಲ್ಲಾ, ಶಿವಾನಂದ ಶಿರಗಾವರ ಮುಂತಾದವರು ಇದ್ದರು.








