ಪ್ರಮುಖ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜನಸೇವಕ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಏಕೀಕೃತ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ವ್ಯವಸ್ಥೆಯ ಮೊಬೈಲ್ ಆ್ಯಪ್ ಮತ್ತು ವೆಬ್ ಸೈಟ್ ಹಾಗೂ ಸಾರಿಗೆ ಇಲಾಖೆಯಲ್ಲಿ ಮಾರಾಟಗಾರರ ಹಂತದಲ್ಲೇ ಹೊಸ ವಾಹನ ನೋಂದಣಿ ಪ್ರಮಾಣ ಪತ್ರ ನೀಡುವ ಸೇವೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೊಂದು ಕ್ರಾಂತಿಕಾರಿ ಯೋಜನೆ. ಜನರಿಗೆ ತಮ್ಮ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳು ಬಂದರೆ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ನಿವೃತ್ತ ಐಎಎಸ್ ಅಧಿಕಾರಿ ವಿಜಯ ಭಾಸ್ಕರ್ ಅವರ ನೇತೃತ್ವದ ಆಡಳಿತ ಸುಧಾರಣಾ ಸಮಿತಿ ಶಿಫಾರಸು ಆಧರಿಸಿ ಸಕಾಲ ಕಾನೂನಿನಡಿ ಜನಸೇವಕ ಯೋಜನೆ ಆರಂಭಿಸಲಾಗಿದೆ.
ಆಳುವ ಜನಪ್ರತಿನಿಧಿಗಳು ಮತ್ತು ಆಡಳಿತ ನಡೆಸುವ ಅಧಿಕಾರಿಗಳು ತಮ್ಮ ಕರ್ತವ್ಯವಗಳಿಗೆ ಉತ್ತರದಾಯಿಗಳಾಗಿರುವ ಸ್ಪಷ್ಟತೆಯನ್ನು ಅರಿತುಕೊಂಡರೆ ಆರಂಭಿಕ ಹಂತದಲ್ಲೇ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸರಳವಾಗಿ ಜನರಿಗೆ ಸೇವೆ ದೊರೆಯುತ್ತದೆ. ಜನರ ಸಮಯ, ಹಣ ಕೂಡ ಉಳಿತಾಯವಾಗುತ್ತದೆ ಎಂದರು.
ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿ.ಸಿ. ನಾಗೇಶ್, ಶಾಸಕರಾದ ಎಸ್. ಸುರೇಶ್ ಕುಮಾರ್, ರಿಜ್ವಾನ್ ಅರ್ಷದ್ ಮತ್ತಿತರರು ಭಾಗವಹಿಸಿದ್ದರು.









