ಬೆಂಗಳೂರು: ದೋಸ್ತಿಗಳು ಕೈಗೊಂಡ ಮೈಸೂರು ಚಲೋ ಪಾದಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ.
ಮುಡಾ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ವತಿಯಿಂದ ನಡೆಯುತ್ತಿರುವ `ಮೈಸೂರು ಚಲೋ’ (Mysuru Chalo) ಪಾದಯಾತ್ರೆಯ 2ನೇ ದಿನಕ್ಕೆ ಸಾಗಿದೆ. ಇಂದು ಬೆಳಿಗ್ಗೆಯೇ ಪಾದಯಾತ್ರೆ ಆರಂಭಗೊಂಡಿದ್ದು, ಬಿಡದಿಯಿಂದ ರಾಮನಗರದ (Ramanagara) ಕೆಂಗಲ್‌ವರೆಗೆ ಸಾಗಲಿದೆ. ಇಂದು ಒಟ್ಟು 22 ಕಿಮೀ ವರೆಗೆ ಪಾದಯಾತ್ರೆ ಸಾಗಲಿದೆ. ನಂತರ ರಾಮನಗರದಲ್ಲಿ ಸಂಜೆ 4 ಗಂಟೆ ವೇಳೆಗೆ ದೋಸ್ತಿ ನಾಯಕರ ಸಾರ್ವಜನಿಕರ ಸಭೆ ನಡೆಯಲಿದೆ.
ಪಾದಯಾತ್ರೆಗೂ ಮುನ್ನ ಬಿಡದಿಯಲ್ಲಿ ಮುಖಂಡರ ಜೊತೆ ವಿಜಯೇಂದ್ರ (BY Vijayendra), ಶಾಸಕರಾದ ಸಿ.ಕೆ ರಾಮಮೂರ್ತಿ, ಎಂ. ಕೃಷ್ಣಪ್ಪ, ಡಿ.ಎಸ್ ಅರುಣ್, ಎನ್. ರವಿಕುಮಾರ್, ಶರಣು ಸಲಗರ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಪ್ರಮುಖರು ಉಪಾಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿರುವ ವಿಜಯೇಂದ್ರ, ನಮ್ಮ ಪಾದಯಾತ್ರೆ ಹಾಗೂ ಜನರ ಬೆಂಬಲ ಕಂಡು ಆಡಳಿತ ಪಕ್ಷಕ್ಕೆ ಗಾಬರಿಯಾಗಿದೆ. ನಾವು ರಾಜ್ಯದ ಜನರ ಪರ ಪ್ರಶ್ನೆ ಕೇಳುತ್ತಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಸಿಎಂ, ಡಿಸಿಎಂ ಇಬ್ಬರೂ ಉತ್ತರ ನೀಡಬೇಕು. ಆದರೆ, ಅವರಿಬ್ಬರು ಉತ್ತರ ನೀಡುವ ಬದಲು, ಬೆದರಿಕೆ ಹಾಕುತ್ತಿದ್ದಾರೆ ಅವರಿಬ್ಬರೂ (ಸಿಎಂ, ಡಿಸಿಎಂ) ಉತ್ತರ ಕೊಡಬೇಕು. ಆದರೆ, ಅವರಿಬ್ಬರು ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಸದನದಲ್ಲಿಯೂ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಉತ್ತರ ಕೊಡೋವರೆಗೂ ನಾವು ಹೋರಾಟ ಬಿಡಲ್ಲ. ಇದು ಹಗರಣಗಳ ಕೂಪ ಆಗಿದೆ. ಆಡಳಿತ ಪಕ್ಷದ ಪರಿಸ್ಥಿತಿ ಹಾಳಾಗಿದೆ. ಭ್ರಷ್ಟಾಚಾರದಲ್ಲಿ ಎಲ್ಲರೂ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.








