ನವದೆಹಲಿ: ಭಾರತದ ರೈಲ್ವೆ ಇತಿಹಾಸದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾ ಹೈಟೆಕ್ ಆಗುತ್ತಿರುವ ನಮ್ಮ ಭಾರತೀಯ ರೈಲ್ವೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಇಲ್ಲಿಯವರೆಗೆ ಡಬಲ್ ಡೆಕರ್ ಪ್ರಯಾಣಿಕ ರೈಲುಗಳನ್ನು ನಾವು ನೋಡಿದ್ದೆವು. ಇದೀಗ ಡಬಲ್ ಡೆಕರ್ ಕಂಟೈನರ್ ಸೇವೆಯನ್ನು ಭಾರತೀಯ ರೈಲ್ವೆ ಆರಂಭಿಸಿದ್ದು, ಸರಕು ಸಾಗಾಣಿಕೆ ಕ್ಷೇತ್ರಕ್ಕೆ ಮತ್ತಷ್ಟು ಪುಷ್ಠಿ ಸಿಗಲಿದೆ.
ಕಳೆದ ಮಾರ್ಚ್ ತಿಂಗಳಲ್ಲಿಯೇ ಡಬಲ್ ಡೆಕರ್ ಕಂಟೇನರ್ ಗೂಡ್ಸ್ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಮೂರು ತಿಂಗಳ ಬಳಿಕ ಡಬಲ್ ಡೆಕರ್ ಮೊದಲ ಕಂಟೇನರ್ ರೈಲು ಇಂದಿನಿಂದ ಸಂಚಾರ ಆರಂಭಿಸಿದೆ. ಸದ್ಯ ಆಯ್ದ ವಿದ್ಯುತ್ ಮಾರ್ಗಗಳಲ್ಲಿ ಮಾತ್ರ ಈ ಡಬಲ್ ಡೆಕರ್ ಕಂಟೇನರ್ ಸಂಚಾರ ನಡೆಸಲಿದೆ. ದೇಶದ ಸರಕು ಸಾಗಣೆ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳ ಅಗತ್ಯತೆ ಪ್ರತಿಪಾದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಈ ರೈಲು ಕೊಡುಗೆ ನೀಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಟನ್ ತೂಕದ ಕಾರು, ಬೈಕ್, ಕಂಪ್ಯೂಟರ್, ಎಲೆಕ್ಟ್ರಾನಿಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ತುಂಬಿಕೊಂಡ ಈ ಡಬಲ್ ಡೆಕರ್ ಕಂಟೇನರ್ ಗೂಡ್ಸ್ ರೈಲು ಕಡಿಮೆ ದರದಲ್ಲಿ ಅತ್ಯಂತ ಶೀಘ್ರವಾಗಿ ಸರಬರಾಜು ಮಾಡಲಿದೆ. ಹೀಗಾಗಿ ದೇಶದ ಸರಕು ಸಾಗಣೆ ಕ್ಷೇತ್ರಕ್ಕೆ ಡಬಲ್ ಡೆಕರ್ ಕಂಟೇನರ್ ರೈಲಿನಿಂದ ಮತ್ತಷ್ಟು ಬೂಸ್ಟ್ ಸಿಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಬೆಂಗಳೂರು, ಚೆನ್ನೈ, ಅಹಮದಾಬಾದ್, ದೆಹಲಿ, ವಾರಣಾಸಿ, ಪುಣೆ ಸೇರಿದಂತೆ ಪ್ರಮುಖ ನಗರಗಳ ನಡುವೆ ಡಬಲ್ ಡೆಕರ್ ಕಂಟೇನರ್ ರೈಲು ಓಡಿಸಲು ರೈಲ್ವೆ ಇಲಾಖೆ ಅಧ್ಯಯನ ನಡೆಸುತ್ತಿದೆ.








