ಬೆಂಗಳೂರು ನಗರದಲ್ಲಿ ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ನವವಿವಾಹಿತೆಯೊಬ್ಬಳು ಗಂಡ ಹಾಗೂ ನಾದಿನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು ಮೂಲತಃ ಕಡೂರಿನ ಶ್ವೇತಾ ಎಂದು ಗುರುತಿಸಲಾಗಿದೆ.
ಹಸಿರು ಚಪ್ಪರ ಒಣಗುವ ಮುನ್ನವೇ ಮಗಳ ಸಾವು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶ್ವೇತಾ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮೂರ್ತಿ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯ ಸಂದರ್ಭದಲ್ಲಿ ಶ್ವೇತಾ ಪೋಷಕರು ಶಕ್ತಿಯುತವಾಗಿಯೇ ವರದಕ್ಷಿಣೆ ನೀಡಿ ಮಗಳ ಮದುವೆ ಮಾಡಿಕೊಟ್ಟಿದ್ದರು. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ವೇತಾ, ಪತಿ ಮೂರ್ತಿ ಜೊತೆ ಸುಂದರ ಬದುಕಿನ ಕನಸು ಕಂಡು ಬೆಂಗಳೂರಿಗೆ ಬಂದಿದ್ದರು. ಆದರೆ ಆ ಕನಸುಗಳು ಕಮರಿ ಹೋಗಲು ಕೇವಲ 120 ದಿನಗಳು ಸಾಕಾಯಿತು.
ನಾದಿನಿಯ ಪೀಡನೆ ಹಾಗೂ ಪತಿಯ ಕುಮ್ಮಕ್ಕು
ದಂಪತಿ ವಾಸವಾಗಿದ್ದ ಮನೆಯ ಸಮೀಪವೇ ಮೂರ್ತಿಯ ಅಕ್ಕ ನರಸಮ್ಮ ವಾಸವಿದ್ದರು. ಆರೋಪದ ಪ್ರಕಾರ, ನರಸಮ್ಮ ಆಗಾಗ್ಗೆ ಶ್ವೇತಾ ಅವರ ಮನೆಗೆ ಬಂದು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಈ ಕಿರುಕುಳಕ್ಕೆ ಪತಿ ಮೂರ್ತಿ ಕೂಡ ಸಾಥ್ ನೀಡುತ್ತಿದ್ದರಿಂದ ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಕೂಡ ದಂಪತಿ ನಡುವೆ ಭೀಕರ ಜಗಳ ನಡೆದಿದೆ. ಇದರಿಂದ ನೊಂದ ಶ್ವೇತಾ ಮನೆಯಿಂದ ಹೊರಗೆ ಹೋಗಿದ್ದರು. ಮಧ್ಯಾಹ್ನ ತಾಯಿ ಬುದ್ಧಿಮಾತು ಹೇಳಿ ಕಳುಹಿಸಿದ ನಂತರ ಮನೆಗೆ ಮರಳಿದ ಶ್ವೇತಾಗೆ, ಪತಿ ಮೂರ್ತಿ ಮನೆಗೆ ಬೀಗ ಹಾಕಿಕೊಂಡು ಹೋಗಿರುವುದು ಕಂಡುಬಂದಿದೆ.
ಕೊನೆಯ ಕ್ಷಣದ ನೋವಿನ ಡೆತ್ ನೋಟ್
ಮನೆಯ ಮಾಲೀಕರಿಂದ ಮತ್ತೊಂದು ಕೀ ಪಡೆದು ಒಳಹೋದ ಶ್ವೇತಾ, ಜೀವನದ ಮೇಲೆ ಜಿಗುಪ್ಸೆಗೊಂಡು ಆತ್ಮಹತ್ಯೆಯ ಹಾದಿ ಹಿಡಿದರು. ಸಾಯುವ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ ಅವರ ನೋವು ಆಕ್ರೋಶವಾಗಿ ಹೊರಬಂದಿದೆ. ನನ್ನ ಸಾವಿಗೆ ನನ್ನ ಗಂಡ ಮತ್ತು ಅವರ ಅಕ್ಕನೇ ಕಾರಣ. ಅವರಿಂದ ನನಗೆ ಭರಿಸಲಾಗದ ಹಿಂಸೆ ಆಗುತ್ತಿದೆ. ನನಗೆ ಬದುಕುವ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ಅಮ್ಮಾ, ನಾನು ಸತ್ತ ಮೇಲೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ.
ರಾತ್ರಿ ಮನೆಗೆ ಬಂದ ಪತಿಗೆ ಕಂಡಿತು ಪತ್ನಿಯ ಶವ
ರಾತ್ರಿ 11 ಗಂಟೆಯಾದರೂ ಮೂರ್ತಿ ಮನೆಗೆ ಬಾರದಿರುವುದನ್ನು ಕಂಡ ಮನೆ ಮಾಲೀಕರು ಫೋನ್ ಮಾಡಿ ಪತ್ನಿ ಬಂದಿರುವ ವಿಷಯ ತಿಳಿಸಿದ್ದಾರೆ. ಮೂರ್ತಿ ಮನೆಗೆ ಬಂದು ಕೀ ಹಾಕಿ ಬಾಗಿಲು ತೆರೆದಾಗ ಶ್ವೇತಾ ಬೆಡ್ ರೂಮ್ ನಲ್ಲಿ ಹೆಣವಾಗಿ ನೇತಾಡುತ್ತಿದ್ದರು. ಇದನ್ನು ಕಂಡು ಆತ ಕೂಗಾಡಲು ಶುರುಮಾಡಿದಾಗ ಅಕ್ಕಪಕ್ಕದವರು ಓಡಿಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮಗಳ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿಕ್ಷಕಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಪ್ರತಿಭಾನ್ವಿತ ಯುವತಿ, ವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಓದಿದವರೇ ತುಂಬಿರುವ ಇಂದಿನ ಸಮಾಜದಲ್ಲಿ ಇನ್ನೂ ವರದಕ್ಷಿಣೆಗಾಗಿ ಹೆಣ್ಣನ್ನು ಬಲಿ ಪಡೆಯುತ್ತಿರುವುದು ದುರದೃಷ್ಟಕರ. ಶ್ವೇತಾ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.







