ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ | ಕೊಲೆ ಶಂಕೆ
ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ.
ಗಾನವಿ(27) ಗೃಹಿಣಿ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವವಿವಾಹಿತೆ ಗಾನವಿಗೆ ಪತಿಯ ಕುಟುಂಬಸ್ಥರೆ ವರದಕ್ಷಿಣೆ ತರುವಂತೆ ಪೀಡಿಸಿ ಕೊಲೆ ಮಾಡಿದ್ದಾರೆ ಎಂದು ಗಾನವಿ ತವರು ಮನೆಯವರು ಆರೋಪಿಸಿದ್ದಾರೆ. ಗಾನವಿ ಪತಿ ನಂದೀಪ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ನಂದೀಪ್ ಹಾಗೂ ಗಾನವಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಅನೇಕ ಬಾರಿ ಹಣ ತರುವಂತೆ ನಂದಿತ್ ದೈಹಿಕ ಕಿರುಕುಳ ನೀಡಿತ್ತಿದ್ದ ಎನ್ನಲಾಗುತ್ತಿದೆ. ಮೃತ ಗಾನವಿ ತಂದೆ ಲೋಕಪ್ಪಗೌಡ ಇತ್ತೀಚೆಗಷ್ಟೇ 2 ಲಕ್ಷ ಹಣ ನೀಡಿದ್ದರು. ಆದರೂ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ.
ಗಾನವಿ ತನ್ನ ಮೇಲೆ ಹಲ್ಲೆ ಮಾಡಿರುವ, ಬೈದಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ರೀತಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ತಿಳಿದ ನಂತರ ಕೋಪಿತಗೊಂಡ ಗಂಡ ಗಾನವಿಗೆ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಗಾನವಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುಗಾದಿ ಹಬ್ಬ. ಹೊಸ ವರ್ಷದ ಸಂಭ್ರದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.








