ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ಶ್ರೀಮಂತ, ಪದ್ಮ ಶ್ರೀ ಡಾ. ಸಿ.ಎನ್. ಮಂಜುನಾಥ್ (Dr C N Manjunath ) ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ. ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಜೀವನ ರೂಪಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ (Dr C N Manjunath )ಅವರಿಂದ ಈ ಬಾರಿಯ ದಸರಾವನ್ನು ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ 1957ರಲ್ಲಿ ಜನಿಸಿದ ಡಾ. ಸಿ. ಎನ್. ಮಂಜುನಾಥ್ ಅವರು ಈ ಕರುನಾಡ ಕಂಡ ಶ್ರೇಷ್ಠಮಟ್ಟದ ಹೃದಯರೋಗ ತಜ್ಞರು.
ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದ ಇವರು, ಹೃದಯಸಂಬಂಧಿ ರೋಗಗಳನ್ನು ಗುಣಪಡಿಸುತ್ತಲೇ ತಮ್ಮ ವೈದ್ಯಕೀಯ ಶಿಕ್ಷಣದಲ್ಲಿ ಉತ್ಕøಷ್ಟತೆ ಗಳಿಸಿಕೊಂಡರು.
2006ರಿಂದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರು, ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಆಸ್ಪತ್ರೆಗೆ ವಿಶ್ವಮನ್ನಣೆ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ : ಮೊದಲು ಅಭಿಪ್ರಾಯ ಸಂಗ್ರಹ, ಅಲ್ಲಿಯವರೆಗೆ ಶಾಲೆ ಆರಂಭ ಇಲ್ಲ: ಸಿಎಂ ಬಿಎಸ್‍ವೈ ಸ್ಪಷ್ಟನೆ
ಮಂಜುನಾಥ್ ಅವರ ಹಲವಾರು ವಿಶೇಷ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಪ್ರಕಟವಾಗಿವೆ. ಹಾಗೆಯೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹಲವಾರು ವೈದ್ಯಕೀಯ ಸಮಾವೇಶಗಳನ್ನೂ ಇವರು ಆಯೋಜಿಸಿದ್ದಾರೆ.
ಇನ್ನು ಹಳ್ಳಿಗಾಡಿನ ಬಡಜನತೆಯ ಆರೋಗ್ಯದತ್ತ ಇವರು ಹರಿಸಿದ ವಿಶೇಷ ಗಮನ, ನಾಡಿನ ಎಲ್ಲ ವರ್ಗದವರ ಮನಗಳನ್ನು ತಟ್ಟಿದೆ. ಇವರ ಮುಂದಾಳತ್ವದಲ್ಲಿ ಪ್ರತಿನಿತ್ಯ ನಡೆಯುವ ವಿಧವಿಧವಾದ ವಿಶೇಷ ಶಸ್ತ್ರಚಿಕಿತ್ಸೆಗಳು ಅಪಾರ.
ಲಕ್ಷಾಂತರ ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಎಂದಿನಂತೆ ಬದುಕು ಸಾಗಿಸುತ್ತಿದ್ದಾರೆ.

ಅಂದಹಾಗೆ ಇವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಅಳಿಯ ಕೂಡ ಹೌದು. ಆದ್ರೆ ಮಂಜುನಾಥ್ ಅವರು ಎಲ್ಲೂ ರಾಜಕೀಯ ಪ್ರೇರಿತರಾಗಿ ಕೆಲಸ ಮಾಡಿಲ್ಲ. ಮಾವ ದೇವೇಗೌಡ ಹೆಸರು ಬಳಸಿಕೊಂಡು ಮೇಲೆ ಬರಲಿಲ್ಲ.
ಕೇವಲ ನಿಸ್ವಾರ್ಥ ಸೇವೆಯಿಂದಲೇ ಮಂಜುನಾಥ್ ಅವರು ಸಾಧನೆಯ ಶಿಖರವೇರಿದ್ದಾರೆ. ನಿರ್ವಿವಾದ, ಅಜಾತಶತ್ರುವೂ ಆದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಾಶಸ್ತಿ ನೀಡಿದೆ.
ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಸೇವೆಗೆ ಮುಕುಟಪ್ರಾಯವೆನ್ನುವಂತೆ ದೇಶದ ಪದ್ಮಶ್ರೀ ಪ್ರಶಸ್ತಿಯು ಇವರಿಗೆ ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ.
ಇದನ್ನೂ ಓದಿ : ಅ.25ಕ್ಕೆ `ಕೈ’ ಹಿಡೀತಾರೆ ಶರತ್ ಬಚ್ಚೇಗೌಡ: `ಹಸ್ತದ ಜತೆ ಶರತ್’ ಫೋಟೋ ವೈರಲ್
ಅದರಲ್ಲೂ ಕೊರೊನಾದಂತಹ ಸಂಕಷ್ಟದ ಸ್ಥಿತಿಯಲ್ಲಿ ಮಂಜುನಾಥ್ ಅವರು ನಿಜವಾದ ಕೊರೊನಾ ವಾರಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಸೇವಾ ಕೈಂಕರ್ಯ ನಾಡಿಗೆ ಇನ್ನಷ್ಟು, ಮತ್ತಷ್ಟು ದೊರೆಯಲಿ ಎಂಬುದು ನಾಡಿನ ಜನರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅ.16ರಂದು ನಡೆಯಲಿರುವ ದಸರಾ ಉದ್ಘಾಟನೆ ಕಾರ್ಯ ಅವರ ಅಮೃತ ಹಸ್ತದಿಂದ ನೆರವೇರಲಿರುವುದು ಔಚಿತ್ಯ ಮತ್ತು ಅರ್ಥಪೂರ್ಣವೂ ಹೌದು.








