ಕೊರೊನಾ ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳ ಕುರಿತು ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ
ಬೆಂಗಳೂರು: ವೇದ ಕಾಲದಿಂದ ಪ್ರಸನ್ನ ಕಾಯ, ಪ್ರಸನ್ನ ಮನಸು, ಪ್ರಸನ್ನ ಇಂದ್ರಿಯ, ಪ್ರಸನ್ನ ಪಂಚೇಂದ್ರಿಯಗಳು, ಪ್ರಸನ್ನ ಆತ್ಮ ಇರಬೇಕು ಎಂಬ ಮಾತಿದೆ. ಇಹ, ಭೋಗಭಾಗ್ಯದ ಚಿಂತನೆಗಳಿಗಿಂತ ಹೊರತಾಗಿರುವುದು ಆರೋಗ್ಯವಂತರ ಲಕ್ಷಣ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೊರೊನಾ: ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳು” ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತಾಡಿದ ಅವರು, ಐಹಿಕ ಸುಖಕ್ಕೆ ಬೇಕಾದವುಗಳನ್ನೆಲ್ಲ ಪಡೆಯುತ್ತಿದ್ದೇವೆ. ಆದರೆ, ಸುಖ ಕ್ಷೀಣಿಸುತ್ತಿದೆ. ಐಹಿಕ ಸುಖಭೋಗಗಳತ್ತ ಗಮನಕೊಟ್ಟಿರುವ ಜನ ಆರೋಗ್ಯವನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ಕೊರೊನಾ ಮಾತ್ರವಲ್ಲ ಇನ್ನಿತರ ಕಾಯಿಲೆಗಳು ಕಾಡುತ್ತಿವೆ ಎಂದರು.
ದೇಶದ ಜನ ಬಹುತೇಕ ರೋಗಗಳಿಂದ ನರಳುತ್ತಿದ್ದಾರೆ. ಇದರಿಂದ ವೈದ್ಯರ ಅಪಾಯಿಂಟ್ ಮೆಂಟ್ ಪಡೆಯಲು 3 ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದ್ದೇವೆ. ಕರ್ನಾಟದ ಬಜೆಟ್, ದೇಶದ ಬಜೆಟ್ ನಲ್ಲಿ ಶೇ. 2ಕ್ಕಿಂತ ಕಡಿಮೆ ಆದಾಯವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ವಿನಿಯೋಗಿಸುತತ್ತಿದ್ದೇವೆ. ಖಾಸಗಿಯವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ನಮಗೆ ಶಾಲೆ, ಆಸ್ಪತ್ರೆಗಳನ್ನು ನಡೆಸಲಾಗುವುದಿಲ್ಲ ಎಂದು ಬಿಟ್ಟುಕೊಟ್ಟಿದ್ದೇವೆ. ಇದು ಒಳ್ಳೆಯ ಲಕ್ಷಣವಲ್ಲ. ಖಾಸಗಿಯವರು ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೆ ನಮ್ಮ ಆರೋಗ್ಯ, ಶಿಕ್ಷಣದ ಕುರಿತು ಕಾಳಜಿ ಇರುವುದಿಲ್ಲ. ಆದ್ದರಿಂದ ಇವೆರೆಡೂ ಕ್ಷೇತ್ರ ದುಬಾರಿಯಾಗಿವೆ. ಕೋವಿಡ್ ವ್ಯಾಕ್ಸಿನ್ ಗೆ 1.5 ಸಾವಿರದವರೆಗೆ ನೀಡಬೇಕಿದೆ ಎಂದರು.
ಕೋವಿಡ್ ಜಾಗತಿಕ ರೋಗ. ಬಂದು ಒಂದೂವರೆ ವರ್ಷವಾಯಿತು. ಇನ್ನೂ ಎಷ್ಟು ದಿವಸ ಇರುತ್ತದೆ, ಎಷ್ಟು ಅಲೆ ಬರುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲಲ್ಲ. ಕೊರೊನಾ ವೈರಸ್ ನಮ್ಮೊಂದಿಗೆ ಇರಲು ಬಂದಿದೆ. ಹೋಗಲು ಬಂದಿಲ್ಲ. ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಅದರಿಂದ ಮುಕ್ತವಾವಾಗಬಹುದು ಎಂದರು.
ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ನಮಗೆ ಸ್ವಾತಂತ್ರ್ಯವಿಲ್ಲ. ಮಕ್ಕಳೂ ಸೇರಿದಂತೆ ಗೃಹಬಂಧನದಲ್ಲಿದ್ದೇವೆ. ನಿನ್ನೆವರೆಗೂ ಜನ ಮನೆಯಲ್ಲಿರಿ ಎಂದು ಸರ್ಕಾರ ಹೇಳಿತ್ತು. ಇದ್ದೆವು. ಯಾವುದೇ ಪ್ರಾಣಿ ಸ್ವಚ್ಛಂದವಾಗಿ ಇರಲು ಅಪೇಕ್ಷಿಸುತ್ತದೆ. ಆದರೆ, ಕೊರೊನಾ ಕಾರಣದಿಂದಾಗಿ ಯಾವುದೇ ಸಾಮಾಜಿಕ ಚಟುವಟಿಕೆ ಇಲ್ಲ. ಮದುವೆ, ನಾಮಕರಣವಿಲ್ಲ. ಬೇರೆಯವರ ಮನೆಗಳಿಗೆ ಹೋಗುವಂತಿಲ್ಲ. ಒಟ್ಟಿಗೆ ಸೇರಿ ಸಂತೋಷಪಡುವಂತಿಲ್ಲ. ಬಹಳ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದರು.
ಕೆಲವರು ಕೊರೊನಾ ಪಾಸಿಟಿವ್ ಬಂದರೆ ಬಚ್ಚಿಟ್ಟುಕೊಳ್ಳುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ನೆಗೆಟಿವ್ ಥಿಂಕಿಂಗ್ ಜಾಸ್ತಿಯಾಗಿದೆ. ಹತ್ತು ಕಂತುಗಳಲ್ಲಿ ಈ ವೆಬಿನಾರ್ ಮೂಲಕ ಜನಸಾಮಾನ್ಯರಿಗೆ ಸರಿಯಾದ ವಿಷಯವನ್ನು ತಜ್ಞರಿಂದ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಧೈರ್ಯಂ ಸರ್ವತ್ರ ಸಾಧನಂ. ನೀವು ಧೈರ್ಯದಿಂದ ಇದ್ದರೆ ಹುಲಿಯನ್ನೂ ಹೆದರಿಸುತ್ತೀರಿ, ಹೆದರಿದರೆ ಇಲಿಗೂ ನೀವು ಹೆದರುತ್ತೀರಿ. ಕೊರೊನಾ ಈಗ ಹುಲಿಯಂತೆ ಬಂದಿದೆ. ನೀವು ಅದರ ವಿರುದ್ಧ ಹೋರಾಡಬೇಕು. ಪಾಸಿಟಿವ್ ಬಂದರೆ ಹೆದರಬೇಡಿ. ಬಂದವರಿಗೆ ಕೂಡ ನೀವು ಧೈರ್ಯ ಹೇಳಿ. ನೆಗೆಟಿವ್ ಚಿಂತನೆಯನ್ನು ಬಿಡೋಣ ಎಂದರು.
ಕೊರೊನಾ ಮೊದಲ ಅಲೆಯಲ್ಲಿ ಶುಗರ್, ಬಿಪಿ, ಅಸ್ತಮಾ, ಹೃದ್ರೋಗಿಗಳು ಬಲಿಯಾದರು. ಯಾವುದೇ ರೋಗವಿದ್ದವರು ಮೊದಲು ವ್ಯಾಕ್ಸಿನ್ ತೆಗೆದುಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಖಿನ್ನತೆಯ ಪ್ರಮಾಣ 10ರಷ್ಟು ಇದ್ದದ್ದು 30ಕ್ಕೆ ಏರಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಸಂಬಳ ಕಡಿತ ಇತ್ಯಾದಿಗಳಿಂದ ನಿರಾಶೆಗಳಿಗೆ ಒಳಗಾಗಿದ್ದಾರೆ ಎಂದರು.
ಖಿನ್ನತೆ ಬಂದರೆ ವೈದ್ಯರನ್ನು ಸಂಪರ್ಕಿಸಿ. ಶಮನಕಾರಿ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಮಾನಸಿಕ ರೋಗಕ್ಕೆ ಔಷಧ ತೆಗೆದುಕೊಂಡುವರು ಅಡಿಕ್ಟ್ ಆಗುತ್ತಾರೆ ಎಂಬ ತಪ್ಪುಕಲ್ಪನೆ ಇದೆ. ಇದು ಸರಿಯಲ್ಲ. ಬೆಳಗಾವಿ, ಕಲಬುರ್ಗಿ ಮೊದಲಾದ ಎಲ್ಲ ಜಿಲ್ಲೆಗಳಲ್ಲಿ ಈಗ ಮನೋವೈದ್ಯರಿದ್ದಾರೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲೂ ವ್ಯವಸ್ಥೆಯಾಗಿದೆ. ಸಾಮಾನ್ಯ ವೈದ್ಯರೂ ಕೂಡ ಚಿಕಿತ್ಸೆ ಕೊಡುತ್ತಾರೆ ಎಂದರು.
ಕೊರೊನಾ ಸೇರಿದಂತೆ ಇನ್ನಿತರ ರೋಗಗಳನ್ನು ಆಹಾರ ಕ್ರಮದಿಂದ ಸೋಲಿಸಬಹುದು. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ತಿನ್ನಿ. ಹಣ್ಣು, ತಕಾರಿಗಳನ್ನು ಹೆಚ್ಚು ತಿನ್ನಿ. ಇರುವುದರಲ್ಲೇ ಇದು ಆರೋಗ್ಯಕರ. ಕರಿದ ಪದಾರ್ಥ, ಸಿಹಿ, ಮಾಂಸಾಹಾರ ಪದಾರ್ಥಗಳನ್ನು ಕಡಿಮೆ ತಿನ್ನಿ. ಜಂಕ್ ಫುಡ್ ಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಮಕ್ಕಳಿಗೆ ಹೊಟ್ಟೆ, ಕಿಡ್ನಿ, ಲಿವರ್ ಕೆಡುತ್ತದೆ ಎಂದು ಹೇಳಿ ಎಂದರು.
ಪ್ರಸನ್ನ ಕಾಯ, ಮನಸು ಬೇಕೆಂದರೆ 10:30ಕ್ಕೆ ಮಲಗಿ, 6 ಗಂಟೆಗೆ ಎದ್ದೇಳಿ. ಕೊರೊನಾ ಸ್ವಚ್ಛತೆಯ ಪಾಠ ಕಲಿಸಿದೆ. ಒಳ್ಳೆಯ ಗಾಳಿ, ಬೆಳಕು ಇದ್ದರೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಬರುವುದಿಲ್ಲ. ಸಮಯ, ಶಿಸ್ತು ಪಾಲಿಸಿ. ಷರತ್ತಿಲ್ಲದ ಪ್ರೀತಿ ಮತ್ತು ವಿಶ್ವಾಸ ಸ್ನೇಹ ಇರಲಿ. ಒಳ್ಳೆ ಮಾತು, ನಡವಳಿಕೆ ರೂಢಿಸಿಕೊಳ್ಳಿ. ನಮ್ಮವರ ಕುರಿತು ಮೆಚ್ಚುಗೆ, ಶ್ಲಾಘನೆ ಬಹಿರಂಗವಾಗಿ ಮಾಡಿ. ಟೀಕೆ, ತಿರಸ್ಕಾರವನ್ನು ಬಹಿರಂಗವಾಗಿ ಮಾಡಬೇಡಿ.
ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ, ನಮ್ಮಲ್ಲಿ ಎಲ್ಲೋ ಅವಿತುಕೊಂಡಿದ್ದ ಖಿನ್ನತೆಯನ್ನು ಡಾ.ಸಿ.ಆರ್.ಚಂದ್ರಶೇಖರ್ ಇಲ್ಲವಾಗಿಸಿದರು. ಇದಕ್ಕಾಗಿ ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳು ಎಂದರು.
ನಾವು ಹೋಮ್ ಐಸೋಲೇಷನ್ ಕುರಿತು ಜಾಗೃತಿ ಮೂಡಿಸುವಲ್ಲಿ ಸೊತದ್ದು ಕಾಯಿಲೆ ಹೆಚ್ಚಿಸಲು ಕಾರಣವಾಯಿತು. ನಾನು ಕೂಡ ಕೊರೊನಾ ಪೀಡಿತೆ. ಸ್ಯಾಚ್ಯುರೇಷನ್ 86, 87 ಇತ್ತು. ಯಾರಿಗೂ ಹೇಳಲಿಲ್ಲ. ಅನಗತ್ಯವಾದ ಭಯ ಸೃಷ್ಟಿಸಿಕೊಳ್ಳದೆ, ಅದರಿಂದ ಹೊರಬರಬೇಕು. ನಾನು ಹೋಮ್ ಐಸೋಲೇಷನ್ ನಲ್ಲಿದ್ದೆ. ನನ್ನ ಮನೆಯವರು ನೋಡಿಕೊಂಡದ್ದು ತುಂಬಾ ಮಹತ್ವದ್ದು. ಎಲ್ಲ ಕಾಲದಲ್ಲೂ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಬದುಕಿನೊಳಗ ಬಾಳೋದು ಬಾಳ ಕಷ್ಟ ಎಂಬ ಬೇಂದ್ರೆಯವರ ಮಾತಿನಂತೆ ಇರಬೇಕು ಎನ್ನುತ್ತಾರೆ ಡಾ. ಎಂ.ಎಸ್.ಆಶಾದೇವಿ,
ಕಾರ್ಯಕ್ರಮವನ್ನು ನಿರ್ವಹಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ, ಜನಜಾಗೃತಿಯ ಭಾಗವಾಗಿ ಆರೋಗ್ಯ ಬಂಧುತ್ವ ವೆಬಿನಾರ್ ಆಯೋಜಿಸಿದೆ ಎಂದರು. ಜೊತೆಗೆ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಎಲ್ಲರನ್ನು ಸ್ವಾಗತಿಸಿದರು. ಪ್ರಶ್ನೋತ್ತರದಲ್ಲಿ ಡಾ. ಗಿರೀಶ್ ಮೂಡ್ ಮತ್ತು ಡಾ.ಸಿ.ಆರ್.ಚಂದ್ರಶೇಖರ್ ಉತ್ತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಈ ನೆಲ ಈ ಜಲ ಈ ಮಣ್ಣು ನಮ್ಮದು ರಕ್ಷಿಸುವ ಹೊಣೆಗಾರಿಕೆ ನೀವೇ ಹೇಳಿ ಯಾರದು ಮತ್ತು ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇಕಟ್ಟೇ ಕಟ್ಟುತ್ತೇವ ಗೀತೆಗಳನ್ನು ಫಕೀರ್ ಹುಲಿಕೊಟ್ಟಲ್ ಹಾಡಿದರು.