ಹೊಸದಿಲ್ಲಿ, ಮೇ 20 : ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ (WHO) ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿರುವ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್ ಅವರ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತದಿಂದ ನಾಮ ನಿರ್ದೇಶನ ಮಾಡಲ್ಪಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸಭೆಯು ಮೇ 22 ರಂದು ನಡೆಯಲಿದ್ದು, ಡಾ. ಹರ್ಷವರ್ಧನ್ ಅವರನ್ನು ಆಯ್ಕೆ ಮಾಡಲಾಗುತ್ತದೆ.
34 ಮಂದಿ ಸದಸ್ಯರನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಈಗಿನ ಅಧ್ಯಕ್ಷರು ಜಪಾನ್ ನ ಡಾ ಹಿರೊಕಿ ನಕತಾನಿ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಕಳೆದ ವರ್ಷ ಮೇ 22ರಿಂದ 3 ವರ್ಷಗಳವರೆಗೆ ಭಾರತದ ಪ್ರತಿನಿಧಿಯನ್ನು ನಾಮಾಂಕಿತ ಮಾಡುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಗ್ರೂಪ್ ಅವಿರೋಧವಾಗಿ ತೀರ್ಮಾನಿಸಿತ್ತು. 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ ನಿನ್ನೆ ಸಹಿ ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ಡಾ.ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ (WHO) ದ ಎಕ್ಸಿಕ್ಯುಟಿವ್ ಕೌನ್ಸಿಲ್ ಬೋರ್ಡ್ ನ ಅಧ್ಯಕ್ಷರಾಗಿ ಮೇ 22 ರಿಂದ ಮುಂದಿನ ಮೂರು ವರ್ಷಗಳ ಕಾಲ ತಮ್ಮ ಅಧಿಕಾರವನ್ನು ಚಲಾಯಿಸಲಿದ್ದಾರೆ.
ಸಾಮಾನ್ಯವಾಗಿ ಅಧ್ಯಕ್ಷ ಹುದ್ದೆಯನ್ನು ಪ್ರಾದೇಶಿಕ ಗುಂಪುಗಳ ನಡುವೆ ಒಂದು ವರ್ಷದ ಅವಧಿಗೆ ರೊಟೇಶನ್ ಮಾದರಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಇದು ಪೂರ್ಣ ಸಮಯದ ಹುದ್ದೆಯಾಗಿರುವುದಿಲ್ಲ ಮತ್ತು ಕಾರ್ಯಕಾರಿ ಮಂಡಳಿಯ ಸಭೆಗಳ ಅಧ್ಯಕ್ಷತೆಯನ್ನು ಎಕ್ಸಿಕ್ಯುಟಿವ್ ಕೌನ್ಸಿಲ್ ಬೋರ್ಡ್ ನ ಅಧ್ಯಕ್ಷ ವಹಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರ್ಯನಿರ್ವಾಹಕ ಮಂಡಳಿಯನ್ನು ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಅರ್ಹತೆ ಪಡೆದ 34 ವ್ಯಕ್ತಿಗಳಿಂದ ರಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಿಂದ ಆಯ್ಕೆಯಾದ ಸದಸ್ಯ ರಾಷ್ಟ್ರದಿಂದ ಪ್ರತಿಯೊಬ್ಬರೂ ನೇಮಕಗೊಂಡಿದ್ದಾರೆ. ಮೂರು ವರ್ಷಗಳ ಅವಧಿಗೆ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ.
ಕಾರ್ಯನಿರ್ವಾಹಕ ಮಂಡಳಿಯು ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರುತ್ತದೆ ಮತ್ತು ಜನವರಿಯಲ್ಲಿ ಸಾಮಾನ್ಯವಾಗಿ ಮುಖ್ಯ ಸಭೆಯು ನಡೆಯುತ್ತದೆ. ನಂತರ ಮೇ ತಿಂಗಳಲ್ಲಿ ಎರಡನೇ ಕಡಿಮೆ ಅವಧಿಯ ಸಭೆ ನಡೆಯುತ್ತದೆ.
ವಿಶ್ವ ಆರೋಗ್ಯ ಅಸೆಂಬ್ಲಿಯನ್ನು ಉದ್ದೇಶಿಸಿ ಡಾ.ಹರ್ಷವರ್ಧನ್ ಅವರು ಮಾತನಾಡಿದ್ದು, ಕೊರೊನಾ ವೈರಸ್ ಸೋಂಕನ್ನು ಎದುರಿಸಲು ಭಾರತ ಸರ್ವ ರೀತಿಯಲ್ಲೂ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ಸೋಂಕು ತಡೆಗಟ್ಟವಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಜಪಾನ್ ನ ಡಾ. ಹಿರೊಕಿ ನಕಟನಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸ್ಥಾನವನ್ನು ಡಾ. ಹರ್ಷವರ್ಧನ್ ವಹಿಸಿಕೊಳ್ಳಲಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಒಂದು ವಿಶೇಷ ವಿಭಾಗೀಯ ಸಂಸ್ಥೆಯಾಗಿದೆ. ಈ ಸಂಘಟನೆಯು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ಕಾರ್ಯಗಳನ್ನು ಒಟ್ಟಾಗಿಸಿ ಅವುಗಳನ್ನು ಸಫಲವಾಗುವಲ್ಲಿ ಪ್ರಯತ್ನ ಪಡುವ ಗುರಿ ಹೊಂದಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯು ಎಪ್ರಿಲ್ 7, 1948 ರಂದು , ಈ ಸಂಘಟನೆಯನ್ನು ಸ್ಥಾಪಿಸಿದ್ದು, ಸ್ವಿಟ್ಜರ್ಲ್ಯಾನ್ಡ್ನ ಜಿನಿವಾ ನಗರವು ಸಂಘಟನೆಯ ಕೇಂದ್ರವಾಗಿದೆ.