ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದ್ರು : ಸುಧಾಕರ್ ಕಿಡಿ
ಹುಬ್ಬಳ್ಳಿ : ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದು ಕಾಂಗ್ರೆಸ್ ನಾಯಕ ವಿರುದ್ಧದ ಆರೋಗ್ಯ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರು ಯಾವುದೇ ಪ್ರಗತಿ ಕಾರ್ಯವನ್ನು ವಿರೋಧಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಅಲ್ಲದಿದ್ದರೂ, ಒಬ್ಬ ಭಾರತೀಯರಾಗಿ ಕೋವಿಡ್ ಲಸಿಕೆಯ ಸಾಧನೆಯನ್ನು ಅವರು ಶ್ಲಾಘಿಸಬಹುದಿತ್ತು. ಸರ್ಕಾರ ನೀಡುವ ಅಂಕಿ, ಸಂಖ್ಯೆಯನ್ನು ಬುಡಮೇಲು ಮಾಡಿ ಅವರದ್ದೇ ಆದ ಅಂಕಿ, ಸಂಖ್ಯೆ ನೀಡಿದ್ದಾರೆ. ಅವರು ಕೂಡ ಮುಖ್ಯಮಂತ್ರಿಯಾಗಿದ್ದು, ಆಗಲೂ ಇದೇ ಇಲಾಖೆ ಅಂಕಿ ಅಂಶ ನೀಡುತ್ತಿತ್ತು. ಇಂತಹ ನಾಯಕರಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದರು.
ಲಸಿಕೆಯ ವಿಚಾರದಲ್ಲೂ ಅನೇಕರು ರಾಜಕಾರಣ ಮಾಡಿದರು. ಒಂದಾಗಿ ಹೋರಾಡಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡಿತು. ಸಹಕಾರದ ಹೆಸರಲ್ಲಿ ಅಸಹಕಾರ ಮಾಡಿದರು. ಇದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಲಸಿಕೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹೇಳಿದರು. ಪ್ರಾರಂಭದಲ್ಲಿ ಜನರು ಇವರ ಮಾತು ನಂಬಿ ಲಸಿಕೆ ಪಡೆಯದೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಕಾಂಗ್ರೆಸ್ ಗೆ ಈಗ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಬೇಕು. ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದರು.
ಕೋವಿಡ್ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಪ್ರತೀ ದಶ ಲಕ್ಷ ಜನ ಸಂಖ್ಯೆಗೆ ರಷ್ಯಾದಲ್ಲಿ 1,500, ಇಂಗ್ಲೆಂಡ್ ನಲ್ಲಿ 2,020 ಜನ ಕೋವಿಡ್ ನಿಂದ ಮೃತರಾಗಿದ್ದರೆ ಭಾರತದಲ್ಲಿ 323 ಜನರು ಕೋವಿಡ್ ನಿಂದ ಮೃತರಾಗಿದ್ದಾರೆ ಎಂದರು.