ಎಲ್ಲೆಲ್ಲೂ ಸುಧಾಕರ್ | ಸಚಿವ ಸ್ಥಾನಕ್ಕಾಗಿ ಭಾರಿ ಕಸರತ್ತು
ಬೆಂಗಳೂರು : ಇಂದು ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನೇನು ನಾಳೆ ನಾಡಿದ್ದು, ಸಚಿವ ಸಂಪುಟ ರಚನೆಯಾಗಲಿದೆ. ಆದ್ರೆ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ ಅನ್ನೋ ಮಾತುಗಳು ಶುರುವಾಗಿವೆ.
ಅಲ್ಲದೆ ವಲಸೆ ನಾಯಕರನ್ನು ಕೈ ಬಿಡುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತೆ ತಮ್ಮ ಸಚಿವ ಸ್ಥಾನದ ಜೊತೆಗೆ ಆರೋಗ್ಯ ಖಾತೆ ಪಡೆಯಲು ಲಾಬಿ ಆರಂಭಿಸಿದ್ದಾರೆ.
ನಿನ್ನೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಿಸುತ್ತಿದ್ದಂತೆ ಸುಧಾಕರ್ ಅವರು ಬೊಮ್ಮಾಯಿಯ ಬೆನ್ನೇರಿದಂತೆ ಅವರ ಹಿಂದೆಯೇ ಇದ್ದಾರೆ. ನಿನ್ನೆಯಿಂದಲೂ ಸಿಎಂ ಬೊಮ್ಮಾಯಿ ಸುತ್ತಲೇ ಸುಧಾಕರ್ ಗಿರಕಿ ಹೊಡೆಯುತ್ತಿದ್ದಾರೆ.
ಇಂದು ಬೊಮ್ಮಾಯಿ ರಾಜಭವನಕ್ಕೆ ಆಗಮಿಸಿದಾಗಲೂ ಅವರ ಜೊತೆಯಲ್ಲೇ ಸುಧಾಕರ್ ಬಂದ್ರು. ಹಾಗೆ ರಾಜಭವನದ ಹೊರಗಿನ ಸಿಎಂ ಪತ್ರಿಕಾಗೋಷ್ಡಿಯಲ್ಲೂ ಪಕ್ಕದಲ್ಲೇ ನಿಂತಿದ್ದರು. ವಿಧಾನಸೌಧ ಎಂಟ್ರಿಯಲ್ಲೂ, ಸಿಎಂ ಕಚೇರಿ ಪೂಜೆಯಲ್ಲೂ ಸುಧಾಕರ್ ಸಿಎಂ ಹಿಂದೆಯೇ ಇದ್ದರು.