ಬೆಂಗಳೂರು : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಉಪಸ್ಥಿತಿಯಲ್ಲಿ ಆಮ್ಲಜನಕ ಉತ್ಪಾದಕ ಸಂಸ್ಥೆಗಳೊಂದಿಗೆ ಇಂದು ನಡೆದ ಸಭೆಯಲ್ಲಿ, ಆಮ್ಲಜನಕವನ್ನು ಬೇಡಿಕೆಗೆ ತಕ್ಕಂತೆ ಪೂರೈಸಬೇಕೆಂದು ಸೂಚಿಸಲಾಯಿತು.
ಕೊರೊನಾ ಸೋಂಕಿತರಿಗೆ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಸಚಿವ ಡಾ.ಕೆ.ಸುಧಾಕರ್, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಂಸದ ತೇಜಸ್ವಿ ಸೂರ್ಯ ಅವರು ಆಮ್ಲಜನಕ ಪೂರೈಕೆದಾರರು, ಉತ್ಪಾದಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪ್ರಥಮ ಆದ್ಯತೆಯಲ್ಲಿ ಪೂರೈಸಬೇಕೆಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.
ರಾಜ್ಯದಲ್ಲಿ ಆಮ್ಲಜನಕಕ್ಕೆ ಯಾವುದೇ ಕೊರತೆಯಾಗದಂತೆ ಉತ್ಪಾದನೆ ಮಾಡಬೇಕು. ಹಾಗೆಯೇ ಕೊರತೆ ಉಂಟಾಗದಂತೆ ಸಿಲಿಂಡರ್ ಗಳನ್ನು ಪೂರೈಕೆ ಮಾಡಬೇಕು. ಬೆಂಗಳೂರು ನಗರಕ್ಕೆ 3,200 ರಷ್ಟು ಸಿಲಿಂಡರ್ ಬೇಡಿಕೆ ಇದ್ದು, ಇದಕ್ಕೆ ತಕ್ಕಂತೆ ಪೂರೈಕೆ ಮಾಡಬೇಕು ಎಂದು ಸೂಚಿಸಲಾಯಿತು. ಇದಕ್ಕೆ ಉತ್ಪಾದಕ ಸಂಸ್ಥೆಗಳು ಹಾಗೂ ಪೂರೈಕೆದಾರರು ಸಹಮತ ವ್ಯಕ್ತಪಡಿಸಿದರು. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕಿದೆ ಎಂದು ಸಭೆಗೆ ತಿಳಿಸಲಾಯಿತು.
ದಿನದಿಂದ ದಿನಕ್ಕೆ ಆಮ್ಲಜನಕ ಬೇಡಿಕೆಯಲ್ಲಿ ವ್ಯತ್ಯಾಸವಾಗಬಹುದು. ಅದಕ್ಕೆ ತಕ್ಕಂತೆ ಪೂರೈಕೆ ಮಾಡಬೇಕಾಗುತ್ತದೆ, ಏಪ್ರಿಲ್ 30 ರವರೆಗೂ ಇರುವ ಬೇಡಿಕೆಯನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು. ಕೈಗಾರಿಕೆ ಬಳಕೆಗೂ ಆಮ್ಲಜನಕ ಅಗತ್ಯವಿದೆ. ಆದರೆ ಮೊದಲ ಆದ್ಯತೆಯನ್ನು ಆರೋಗ್ಯ ವಲಯಕ್ಕೆ ನೀಡಬೇಕು. ಇದಕ್ಕಾಗಿ ಕೈಗಾರಿಕಾ ಬಳಕೆಗೆ ಪೂರೈಸುವ ಆಮ್ಲಜನಕದ ಪ್ರಮಾಣ ಕಡಿಮೆ ಮಾಡಿ, ಆರೋಗ್ಯ ಕೇಂದ್ರಗಳಿಗೆ ಹೆಚ್ಚು ಆಮ್ಲಜನಕ ಪೂರೈಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.
ಕೇಂದ್ರಕ್ಕೆ ಮನವಿ
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಅಕ್ಕಪಕ್ಕದ ರಾಜ್ಯಗಳಿಗೂ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಅದರ ಉಪಯೋಗ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಗಳಿಗೆ ಅಗತ್ಯ ಸೂಚನೆ ನೀಡಬೇಕು. *ರಾಜ್ಯಕ್ಕೆ ಬೇಕಾಗಿರುವ ಸಿಲಿಂಡರ್‌ಗಳನ್ನು ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗದೆ ಎಂದು ತಿಳಿಸಿದರು.
ಶೇ.50 ರಷ್ಟು ಹಾಸಿಗೆ
ಇದಕ್ಕೂ ಮುನ್ನ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆ ಮೀಸಲಿಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಹಾಸಿಗೆ ಮೀಸಲಿಡಲಾಗುತ್ತಿದೆ.








