Dr. K. Sudhakar | ಗೌರಿಬಿದನೂರಿನಲ್ಲಿ ಕಮಲ ಅರಳಿಸಲು ಕಂಕಣ ಬದ್ಧರಾಗಿ
ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಬಿಜೆಪಿ ನೆಲೆ ಭದ್ರವಾಗಿದ್ದು ಒಗ್ಗಟ್ಟು ಮತ್ತು ಒಂದೇ ಗುರಿಯೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಂದೆ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನೋತ್ಸವ ಕಾರ್ಯಕ್ರಮ ಗಟ್ಟಿ ಅಡಿಪಾಯ ಆಗಬೇಕು ಎಂದು ಸಲಹೆ ನೀಡಿದರು.
ಜು.28ರಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಸೆ.8ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸ್ತುತ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ್ದರೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದೆ. ಹಾಗಾಗಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜನಸಾಮಾನ್ಯರಿಗೆ ನೀಡಿರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಬೇಕು. ಸರ್ಕಾರದ ರಿಪೋರ್ಟ್ ಕಾರ್ಡ್ ಜನರ ಮುಂದಿಡಬೇಕು. ಅಂತಿಮವಾಗಿ ನಿರ್ಣಯ ಮಾಡುವುದು ಜನಸಾಮಾನ್ಯರೇ ಆಗಿರುವುದರಿಂದ ಜನರ ಮುಂದೆ ಎಲ್ಲ ಮಾಹಿತಿ ಇಡಬೇಕು ಎಂಬ ಉದ್ಧೇಶದಿಂದ ಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಬಿಜೆಪಿ ಸಿದ್ಧಾಂತ ದೇಶಕ್ಕಾಗಿ ಮೊದಲ ಹೋರಾಟ ಮಾಡುವುದು, ನಂತರ ರಾಜಕೀಯ ಪಕ್ಷ, ಕೊನೆಯದಾಗಿ ನಮ್ಮ ಬಗ್ಗೆ ನಾವು ವಿಚಾರ ಮಾಡಬೇಕು. ಅದೇ ವಿಚಾರವಾಗಿ ದೇಶಕ್ಕೆ ಸಮರ್ಪಣೆ ಮಾಡಿಕೊಳ್ಳಬೇಕು, ಮಂಗಳೂರಿನಲ್ಲಿ 3 ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಗುರುವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಆಗಮಿಸಿದ್ದರು. ನ್ಯಾಚುರೋಪತಿ ಆಸ್ಪತ್ರೆಯನ್ನು ಅವರು ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡ ಶ್ರೇಷ್ಠ ಸಂತ ಎಂದು ಅವರಿಗೆ ಹೇಳಿದ್ದೇನೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಈ ಪಕ್ಷದ ಶಕ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಬಸವರಾಜ ಬೊಮ್ಮಾಯಿ ಅವರು ಉನ್ನತ ಸ್ಥಾನ ಅಲಂಕರಿಸಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದೆ ಎಂದರು.
ಗೌರಿಬಿದನೂರು ಕ್ಷೇತ್ರವನ್ನು ಪಕ್ಷ ಈಗಾಗಲೇ ಗುರ್ತಿಸಿದೆ. ರಾಜ್ಯ ಮಟ್ಟದ ಮಂಡಳಿಯೊಂದರ ಅಧ್ಯಕ್ಷ ಸ್ಥಾನ ಈ ಕ್ಷೇತ್ರಕ್ಕೆ ಸಿಕ್ಕಿದೆ. ಸೆ.8 ರಂದು ನಡೆಯಲಿರುವ ಜನೋತ್ಸವ ಪಕ್ಷ ಸಂಘಟನೆಗೆ ಒಂದು ಅವಕಾಶ. ಗೌರಿಬಿದನೂರಿನಲ್ಲಿರುವ 31 ಗ್ರಾಪಂ, ನಗರದಲ್ಲಿರುವ 31 ವಾರ್ಡುಗಳ ಜವಾಬ್ದಾರಿ ಸ್ಥಳೀಯ ಮುಖಂಡರಿಗೆ ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಮುಖ್ಯವಾಗಿ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಕೆಲಸವಾಗಬೇಕು, ವಿದ್ಯಾಸಿರಿ ಯೋಜನೆ, ಕೃಷಿ ಸಮ್ಮಾನ್ ಯೋಜನೆಯಂತಹ ಫಲಾನುಭವಿಗಳು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ರೈತರ ಖಾತೆಗೆ ಬರುತ್ತಿರುವ ಹಣ ನೀಡುತ್ತಿರುವವರು ಯಾರು ಎಂಬ ಅರಿವು ಜನಸಾಮಾನ್ಯರಿಗೆ ಇರಬೇಕಲ್ಲವೇ ಎಂದು ಸಚಿವರು ಪ್ರಶ್ನಿಸಿದರು.
ಈ ಹಿಂದೆ ಯಾವುದೇ ಯೋಜನೆಯ ಹಣ ಪಡೆಯಬೇಕಾದರೆ ಮಧ್ಯವರ್ತಿಗಳಿಗೆ ಹಣ ಸಲ್ಲಿಸಬೇಕಿತ್ತು, ಅಲ್ಲದೆ ತಿಂಗಳುಗಳ ಗಟ್ಟಲೆ ಕಚೇರಿಗಳಿಗೆ ಅಳೆಯಬೇಕಿತ್ತು, ಆದರೆ ಈಗ ಅಂತಹ ಸ್ಥಿತಿ ಇಲ್ಲ. ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆದ ಬೆಳೆಗಳಿಗೆ ಪರಿಹಾರ, ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರುಪಾಯಿ ಉಚಿತ ಚಿಕಿತ್ಸೆ, ಇದು ವಾರ್ಷಿಕ ಯೋಜನೆಯಾಗಿದ್ದು ವಿಶ್ವದಲ್ಲಿಯೇ ಇಂತಹ ಯೋಜನೆಯಿಲ್ಲ. ರಾಜ್ಯದ 5 ಕೋಟಿ ಜನರಿಗೂ ಉಚಿತ ಕಾರ್ಡು ವಿತಣೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.