ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ನಾವೂ ನೋಡ್ತೀವಿ : ಸುಧಾಕರ್ ವಿರುದ್ಧ ಸಿದ್ದು ಗರಂ
ಬೆಂಗಳೂರು : ಅಧಿಕಾರ ಶಾಶ್ವತವಲ್ಲ. 2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಹಣ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ ಬಿಜೆಪಿ ಪಕ್ಷ ಸೇರಿ ಮಂತ್ರಿಯಾಗಿರುವ ಡಾ.ಕೆ.ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರ ಶಾಶ್ವತವಲ್ಲ. 2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ.
ಉಪ ಚುನಾವಣೆ ಆಗಲೀ, ಸಾರ್ವತ್ರಿಕ ಚುನಾವಣೆಯೇ ಆಗಲಿ ಎಲ್ಲಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೆಲುವಿಗಾಗಿ ಹೋರಾಟ ಮಾಡುತ್ತೇನೆ. ಕಳೆದ ಉಪಚುನಾವಣೆಯಲ್ಲಿ ಕೂಡ 15 ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮಾಡಿದ್ದೆ. ನಮ್ಮ ಪಕ್ಷದ ಪ್ರತಿ ಅಭ್ಯರ್ಥಿಯ ಗೆಲುವು ನನಗೆ ಮುಖ್ಯ.
ಬೆಲೆಯೇರಿಕೆ ವಿರುದ್ಧ ಜನರು ತಿರುಗಿ ಬೀಳುವವರೆಗೆ ನಿರಂತರವಾಗಿ ಸರ್ಕಾರಗಳು ಬೆಲೆ ಹೆಚ್ಚು ಮಾಡುತ್ತಲೇ ಇರುತ್ತವೆ. ವಿರೋಧ ಪಕ್ಷವಾಗಿ ನಾವು ಶಕ್ತಿಮೀರಿ ಹೋರಾಟ ಮಾಡುತ್ತಲೇ ಇದ್ದೇವೆ, ಜನ ಬೀದಿಗಳಿದಾಗ ಮಾತ್ರ ನಮ್ಮ ಹೋರಾಟಕ್ಕೆ ಬಲ ಬರುವುದು.
ಕೇಸರಿ ಕಂಡರೆ, ಆರ್.ಎಸ್.ಎಸ್ ನವರನ್ನು ಕಂಡರೆ ನನಗ್ಯಾಕೆ ಭಯ? ನನಗೆ ಸಮಾಜದ ಬಗ್ಗೆ ಕಾಳಜಿ ಇದೆ. ಸಂಘ ಪರಿವಾರದವರು ಅಶಾಂತಿ ನಿರ್ಮಾಣದ ಮೂಲಕ ಸಮಾಜ ಒಡೆಯುವ ಕೆಲಸ ಮಾಡ್ತಾರೆ ಎಂಬ ಭಯವಿದೆ. ಸೌಹಾರ್ದತೆಗೆ ಧಕ್ಕೆಯಾಗಾದ ಮನಸಿಗೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.