ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಕೊರೋನಾ ಸೋಂಕು
ಬೆಂಗಳೂರು, ಅಗಸ್ಟ್ 7 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ . ಮೂರು ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಈ ಬಗ್ಗೆ ಸ್ವತಃ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕೋವಿಡ್-19 ಪರೀಕ್ಷೆಯಲ್ಲಿ ನನಗೂ ಸೋಂಕು ತಾಗಿರುವುದು ದೃಢವಾಗಿದೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ನಲ್ಲಿದ್ದು, ಮುಂಜಾಗ್ರತೆ ವಹಿಸಬೇಕು ಎಂದು ಯತೀಂದ್ರ ಮನವಿ ಮಾಡಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರಿಗೂ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಸದ್ಯದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದ್ದು, ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 11,881 ಸೇರಿದಂತೆ ರಾಜ್ಯದಾದ್ಯಂತ 34,139 ಹೊಸ ಪ್ರಕರಣಗಳು ವರದಿಯಾಗಿವೆ