ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ…
ದ್ರೌಪದಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ದ್ರೌಪದಿ ಮುರ್ಮು ಅವರು ಬೆಳಗ್ಗೆ 10.15ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲ್ ತಲುಪಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು 21 ಗನ್ ಸೆಲ್ಯೂಟ್ ನೀಡಲಾಯಿತು.
ಇದಕ್ಕೂ ಮುನ್ನ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನ ತಲುಪಿ, ಅಲ್ಲಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಪತ್ನಿಯನ್ನು ಭೇಟಿಯಾದರು. ಇಬ್ಬರೂ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದರು. ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಅವರು ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದ್ದರು.

ಉಪ ರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಮಂತ್ರಿಮಂಡಲದ ಸದಸ್ಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳು, ಸಂಸತ್ತಿನ ಸದಸ್ಯರು ಮತ್ತು ಭಾರತ ಸರ್ಕಾರದ ಪ್ರಧಾನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಇಂದು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಮುರ್ಮು ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಒಡಿಶಾದಿಂದ 64 ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಪ್ರಮಾಣ ವಚನದ ನಂತರ ರಾಷ್ಟ್ರಪತಿ ಭವನದಲ್ಲಿ ವಿಶೇಷ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.








