ಗಂಗೂಲಿಯವರನ್ನು ತಂಡದಿಂದ ಕೈಬಿಟ್ಟಿರುವುದು ಯಾಕೆ ? ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆ ಹೇಳುವುದೇನು ?
ಕೊಲ್ಕತ್ತಾದ ಮಹಾರಾಜ ಸೌರವ್ ಗಂಗೂಲಿ ಹೆಸರು ಕೇಳಿದಾಗ ತಕ್ಷಣ ನೆನಪಾಗೋದು ಟೀಮ್ ಇಂಡಿಯಾ.. 2000ದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಟೀಮ್ ಇಂಡಿಯಾ ಎಂಬ ಹೆಸರನ್ನಿಟ್ಟುಕೊಂಡು ಮುನ್ನಡೆಸಿದ್ದ ಸಾರಥಿ ಸೌರವ್ ಗಂಗೂಲಿ. ಮ್ಯಾಚ್ ಫಿಕ್ಸಿಂಗ್ ನಿಂದ ಕಂಗೆಟ್ಟಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಸ್ವರೂಪ ಕೊಟ್ಟಿದ್ದು ಕೂಡ ಗಂಗೂಲಿಯೇ. ಯುವ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬಲಿಷ್ಠ ತಂಡವನ್ನು ಕಟ್ಟಿದ್ದ ಹೆಗ್ಗಳಿಕೆ ಕೂಡ ಗಂಗೂಲಿಗೆ ಸಲ್ಲುತ್ತದೆ. ಹಾಗೇ ದೇಶಿ ಮತ್ತು ವಿದೇಶಿ ನೆಲಗಳಲ್ಲಿ ಟೀಮ್ ಇಂಡಿಯಾಗೆ ಗೆಲುವಿನ ರುಚಿ ತೋರಿಸಿದ್ದು ಕೂಡ ಈ ದಾದಾನೇ.. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಆಟಗಾರರಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನೂ ಮೈಗೂಡಿಸಿಕೊಳ್ಳುವಂತೆ ಮಾಡಿದ್ದು ಸಹ ಸೌರವ್ ಗಂಗೂಲಿಯೇ..
ಅಂತಹ ಸೌರವ್ ಗಂಗೂಲಿಯವರನ್ನು 2005ರಲ್ಲಿ ಟೀಮ್ ಇಂಡಿಯಾದ ನಾಯಕತ್ವದಿಂದಲೇ ಕೈಬಿಡಲಾಗಿತ್ತು. ಆಗ ಗಂಗೂಲಿಯ ಅಭಿಮಾನಿಗಳು ಕುಪಿತಗೊಂಡಿದ್ದರು. ಪಶ್ಚಿಮ ಬಂಗಾಳದಲ್ಲಂತೂ ಆಗಿನ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಹಾಗೇ ಸಂಸತ್ ನಲ್ಲೂ ಈ ವಿಚಾರ ಚರ್ಚೆಯಾಗಿತ್ತು. ಆಗಿನ ಕೋಚ್ ಗ್ರೆಗ್ ಚಾಪೆಲ್ ಕೂಡ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ರೆ ಗಂಗೂಲಿಯವರನ್ನು ಕೈಬಿಟ್ಟಿರುವ ಬಗ್ಗೆ ಆಗಿನ ಆಯ್ಕೆ ಸಮಿತಿಯ ಮುಖ್ಯಸ್ಥ ಕಿರಣ್ ಮೋರೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಒಂದಂತೂ ನಿಜ, ಗಂಗೂಲಿಯಂತಹ ಆಟಗಾರರನ್ನು ತಂಡದಿಂದ ಕೈಬಿಡುವುದು ಸುಲಭದ ಕೆಲಸವಾಗಿರಲಿಲ್ಲ. ಅದೊಂದು ಕಠಿಣ ನಿರ್ಧಾರವಾಗಿತ್ತು. ಹಾಗಂತ ನಾನು ಒಬ್ಬ ತೆಗೆದುಕೊಂಡ ನಿರ್ಧಾರವಲ್ಲ. ಐದು ಮಂದಿ ಆಯ್ಕೆ ಸಮಿತಿ ಸದಸ್ಯರು ಪರಸ್ಪರ ಚರ್ಚೆ ನಡೆಸಿ ತೆಗೆದುಕೊಂಡ ನಿರ್ಧಾರವಾಗಿತ್ತು. ಹಾಗೇ ಟೀಮ್ ಮ್ಯಾನೇಜ್‍ಮೆಂಟ್, ನಾಯಕ, ಕೋಚ್ ಹಾಗೂ ಕೆಲವು ಹಿರಿಯ ಆಟಗಾರರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವು ಎಂದು ಕಿರಣ್ ಮೋರೆ ಹೇಳಿದ್ದಾರೆ.
ಹಾಗಂತ ನಾವೇನು ರಾತ್ರೋ ರಾತ್ರಿ ಈ ನಿರ್ಧಾರ ತಗೊಂಡಿಲ್ಲ. ಕೇವಲ ಪ್ರತಿಕಾರಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ನಾವು ತುಂಬಾ ಯೋಚನೆ ಮಾಡಿ ತೆಗೆದುಕೊಂಡು ನಿರ್ಧಾರವಾಗಿತ್ತು. ಏನು ಮಾಡಬೇಕು? ತಂಡದ ಭವಿಷ್ಯವನ್ನು ಮುಂದಿಟ್ಟುಕೊಂಡು ಸ್ಪಷ್ಟ ಮನಸ್ಸಿನಿಂದ ತೆಗೆದುಕೊಂಡ ನಿರ್ಧಾರವಾಗಿತ್ತು. ಆ ಸಮಯದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವ ನೀಡಿದ್ರೆ ಉತ್ತಮ ಎಂಬ ಭಾವನೆಯನ್ನು ಆಯ್ಕೆಗಾರರು ಹೊಂದಿದ್ದೇವು. ಹೀಗಾಗಿ ಗಂಗೂಲಿ ಬದಲು ರಾಹುಲ್ ದ್ರಾವಿಡ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದೇವು ಎಂದು ಕಿರಣ್ ಮೋರೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಂತೆ ಹೇಳಿದ್ದಾರೆ.
ಇನ್ನು ತಂಡದಿಂದ ಆಟಗಾರರನ್ನು ಕೈಬಿಟ್ಟಾಗ ಅವರಿಗೆ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಅವಕಾಶವೂ ಇದೆ. ನಾನು ಆಡುತ್ತಿರುವಾಗಲೂ ಸಹ ಸಾಕಷ್ಟು ಬಾರಿ ತಂಡದಿಂದ ಹೊರಗಿದ್ದೆ. ಮತ್ತೆ ತಂಡವನ್ನು ಸೇರಿಕೊಂಡಿದ್ದೆ. ಹಾಗೇ ನೋಡಿದ್ರೆ ಮೋಹಿಂದರ್ ಅಮರನಾಥ್ ಅವರು ಸುಮಾರು 10-12 ಬಾರಿ ತಂಡದಿಂದ ಕೈಬಿಟ್ಟು ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ತಂಡದಿಂದ ಕೈಬಿಡುವುದು, ಮತ್ತೆ ತಂಡವನ್ನು ಸೇರಿಕೊಳ್ಳುವುದು ಆಟಗಾರರ ಪಾಲಿಗೆ ಮಾಮೂಲಿಯಾಗಿದೆ ಎಂದು ಕಿರಣ್ ಮೋರೆ ಅಭಿಪ್ರಾಯಪಟ್ಟಿದ್ದಾರೆ.
ತಂಡದಿಂದ ಕೈಬಿಟ್ಟಾಗ ನಮಗೆ ಅವರ ಮೇಲೆ ದ್ವೇಷವಿದೆ.. ಪ್ರತಿಕಾರಕ್ಕಾಗಿ ತಂಡದಿಂದ ಕೈಬಿಟ್ಟಿದ್ದೇವೆ ಅಂತಲ್ಲ. ಯಾಕಂದ್ರೆ ತಂಡದಿಂದ ಕೈಬಿಟ್ಟಾಗ ಆಗುವಂತಹ ನೋವು ಏನು ಎಂಬುದು ನಮಗೂ ಗೊತ್ತಿದೆ. ನಮಗೂ ಅಂತಹ ಅನುಭವಗಳು ಆಗಿವೆ. ಹೀಗಾಗಿ ಆಟಗಾರರನ್ನು ತಂಡದಿಂದ ಕೈಬಿಟ್ಟಾಗ ಅವರ ದೃಷ್ಟಿಕೋನದಿಂದ ಅವರು ಹೇಗೆ ಯೋಚಿಸುತ್ತಾರೆ ಎಂಬುದನ್ನು ನಾನು ಕೂಡ ಯೋಚಿಸುತ್ತಿದೆ ಎಂದು ಕಿರಣ್ ಮೋರೆ ಹೇಳಿದ್ದಾರೆ.
ಇನ್ನು ಧೋನಿಯವರನ್ನು ತಂಡಕ್ಕೆ ನಾವೇ ಆಯ್ಕೆ ಮಾಡಿಕೊಂಡಿರುವುದು ಅಂತ ತುಂಬಾ ಜನ ಹೇಳಿಕೊಳ್ಳುತ್ತಾರೆ. ಆದ್ರೆ ಧೋನಿಯವರನ್ನು ನಾವೇ ಆಯ್ಕೆ ಮಾಡಿಕೊಂಡಿರುವುದು. ಐವರು ಆಯ್ಕೆ ಸಮಿತಿ ಸದಸ್ಯರು ಚರ್ಚೆ ಮಾಡಿ ಆಯ್ಕೆ ಮಾಡಿರುವುದು ಎಂದು ಕಿರಣ್ ಮೋರೆ ಅವರು ತಿಳಿಸಿದ್ದಾರೆ.








