ಬೆಂಗಳೂರು: ನನಗೂ ಡ್ರಗ್ಸ್ ಪಾರ್ಟಿಗಳಿಗೂ ಸಂಬಂಧವೇ ಇಲ್ಲ. ನನಗೆ ಡ್ರಗ್ಸ್ ತೆಗೆದುಕೊಳ್ಳುವ ಚಟವೂ ಇಲ್ಲ. ಪಾರ್ಟಿಗಳಿಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದೇನೆ ಎಂದು ಲೂಸ್ ಮಾದ ಖ್ಯಾತಿಯ ನಟ ಯೋಗೇಶ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗೇಶ್, ಶನಿವಾರ ಐಎಸ್‍ಡಿ ಕಚೇರಿಯಿಂದ ನನಗೆ ನೋಟಿಸ್ ಬಂದಿತ್ತು. ಹೀಗಾಗಿ ನಿನ್ನೆ ಹೋಗಿ ವಿಚಾರಣೆಗೆ ಒಳಗಾಗಿದ್ದೆ. ಎರಡೂವರೆಗೆ ಗಂಟೆಗಳ ಕಾಲ ನನ್ನ ವಿಚಾರಣೆ ನಡೆಸಿದರು. ನನಗಿರುವ ಮಾಹಿತಿಯ ವಿವರಣೆ ನೀಡಿದ್ದೇನೆ ಎಂದರು.
2011-12ರ ನಂತರ ನಾನು ಯಾವುದೇ ಪಾರ್ಟಿಗಳಿಗೆ ಹೋಗಿಲ್ಲ. ನಾನು ಹೋದ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಬಗ್ಗೆ ಮಾಹಿತಿ ಇಲ್ಲ. ವಿರೇನ್ ಖನ್ನಾ, ಆಳ್ವಾ ಸೇರಿದಂತೆ ಯಾವುದೇ ಡ್ರಗ್ಸ್ ಪೆಡ್ಲರ್ ಬಗ್ಗೆ ಗೊತ್ತೇ ಇಲ್ಲ. ಅವರ ಹೆಸರನ್ನು ನಾನು ಇತ್ತೀಚೆಗೆ ಟಿವಿಗಳಲ್ಲಿ ನೋಡಿದ್ದೇನೆ ಅಷ್ಟೇ.
ಮೊದಲು ನಾನು ಸಿಗರೇಟು, ಗುಟ್ಕಾ ಹಾಗೂ ಎಣ್ಣೆ ತುಂಬಾ ಕುಡಿಯುತ್ತಿದ್ದೆ. ನನಗೆ ಚಟ ಎನ್ನುವುದು ಸಿಗರೇಟು, ಗುಟ್ಕಾ, ಎಣ್ಣೆ. ಅದನ್ನೇ ನಾನು ಮಾಡಬಾರದ ಚಟ ಎಂದಿದ್ದೆ, ಈಗ ಅವುಗಳನ್ನು ಬಿಟ್ಟು ಬಿಟ್ಟಿದ್ದೇನೆ. ಚಿತ್ರಗಳು ಸೋಲು ಕಂಡಾಗ ಬೇಸರ ಆಗಿ ಡಿಪ್ರಶನ್ ಸಾಮಾನ್ಯ. ಆಗ ಸಿಗರೇಟು, ಗುಟ್ಕಾ, ಎಣ್ಣೆ ಅಭ್ಯಾಸ ಇತ್ತು. ಈಗ ಅವೆಲ್ಲವನ್ನು ಬಿಟ್ಟಿದ್ದೇನೆ, ಡ್ರಗ್ಸ್ ಚಟ ಇಲ್ಲವೇ ಇಲ್ಲ ಎಂದಿದ್ದಾರೆ ಲೂಸ್ ಮಾದ.
ಐಎಸ್‍ಡಿ ಅಧಿಕಾರಿಗಳು ಸಿನಿಮಾ ಕೆರಿಯರ್ ಹಾಗೂ ದೈನಂದಿನ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದ್ರು. ಡ್ರಗ್ಸ್ ಬಗ್ಗೆಯೂ ಹೇಳಿದ್ರು. ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದೇನೆ. ಡ್ರಗ್ಸ್ ವಿಚಾರಗಳ ಬಗ್ಗೆ ನನ್ನಿಂದ ಯಾವುದಾದರೂ ಮಾಹಿತಿ ಸಿಗಬಹುದು ಎಂದು ಕರೆದಿರಬಹುದು. ನನ್ನ ಪ್ರಕಾರ ನಾನು ಒಬ್ಬನೇ ಅಲ್ಲ, 10-15 ಜನರಿಗೆ ನೋಟಿಸ್ ಹೋಗಿದೆ ಎಂಬ ಮಾಹಿತಿ ಇದೆ ಎಂದು ಯೋಗೀಶ್ ತಿಳಿಸಿದ್ದಾರೆ.
ರಾಗಿಣಿ ನನ್ನ ಟಚ್‍ನಲ್ಲೇ ಇಲ್ಲ-ಯೋಗಿ
2013ರ ನಂತರ ಸಿನಿಮಾ ರಿಲೀಸ್ ನಂತರ ನನ್ನ-ರಾಗಿಣಿ ಸಂಪರ್ಕ ಇಲ್ಲ. ಸಿನಿಮಾ ನಂತರ ನಾನು ರಾಗಿಣಿಗೆ ಒಂದೇ ಒಂದು ಕಾಲ್ ಮಾಡಿಲ್ಲ, ಆಕೆಯೂ ಮಾಡಿಲ್ಲ. ರಾಗಿಣಿ ಬಗ್ಗೆ ಐಎಸ್‍ಡಿ ವಿಚಾರಣೆ ವೇಳೆ ಯಾವುದೇ ಪ್ರಸ್ತಾಪ ಮಾಡಿಲ್ಲ. ನಟ ದಿಗಂತ್, ಐಂದ್ರಿತಾ ಬಗ್ಗೆಯೂ ಐಎಸ್‍ಡಿ ಅಧಿಕಾರಿಗಳು ನನಗೆ ಪ್ರಶ್ನೆ ಕೇಳಿಲ್ಲ ಎಂದು ನಟ ಯೋಗೇಶ್ ಹೇಳಿದ್ದಾರೆ.
ಐಪಿಎಲ್ ಟೈಂಗಳಲ್ಲಿ ಮನೆಗಳಲ್ಲಿ ಪಾರ್ಟಿ ಮಾಡಿದ್ದೇವೆ. ಸ್ಥಳೀಯರು ಬಂದು ಗಲಾಟೆ ಮಾಡಿ ದೂರು ನೀಡಿದ್ರು, ನಾವು ಕ್ಷಮೆ ಕೇಳಿದ ಮೇಲೆ ಅಲ್ಲಿಗೆ ಮುಗಿದು ಹೋಗಿದೆ.
2008ರಲ್ಲೇ ನನ್ನ ಪಾಸ್‍ಪೋರ್ಟ್ expire ಆಗಿದೆ, ಅದನ್ನು ಐಎಸ್‍ಡಿ ಗಮನಕ್ಕೆ ತಂದಿದ್ದೇನೆ. ಹಾಗಾಗಿ ನಾನು ವಿದೇಶಕ್ಕೂ ಹೋಗಿಲ್ಲ. ನನ್ನ ಕಾಲ್ ಡೀಟೇಲ್ಸ್ ಪಡೆದಿದ್ದಾರೆ, ನನ್ನ ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಐಎಸ್‍ಡಿ ವಿಚಾರಣೆಗೆ ಉತ್ತರ ನೀಡಿದ್ದೇನೆ, ಹೀಗಾಗಿ ನನಗೆ ಯವುದೇ ಭಯ ಇಲ್ಲ ಎಂದು ಯೋಗಿ ಪುನರುಚ್ಚರಿಸಿದ್ದಾರೆ.