ಉಡುಪಿ: ಪತಿರಾಯನೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯ (Wife) ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಡ್ಯಾನ್ಸ್ (Dance) ಮಾಡಿ (Husband) ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಈ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಪತ್ನಿ ಅನಿತಾ (38) ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಪತಿ ಲಕ್ಷ್ಮಣ ಡ್ಯಾನ್ಸ್ ಮಾಡಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಅನಿತಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ರೂರು ಕಾಶಿ ಮಠ, ರೆಸಿಡೆನ್ಶಿಯಲ್ ಬ್ಲಾಕ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೊರಬ ತಾಲೂಕು ಮೂಲದ ದಂಪತಿ, ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತಿ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆ ಕಡಿದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಮನೆಯಲ್ಲೇ ಬಿಟ್ಟು ಮನೆಯ ಬಾಗಿಲು ಹಾಕಿಕೊಂಡು ಹಾಲ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಮಹಿಳೆಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಪತಿ ಯಾವುದಕ್ಕೂ ಕ್ಯಾರೆ ಅಂದಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದು ಒಂದೂವರೆ ಗಂಟೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








