ಬೆಂಗಳೂರು : ಜಗತ್ತಿನಾದ್ಯಂತ ಹೆಮ್ಮಾರಿ ಮನುಕುಲವನ್ನು ಕಾಡುತ್ತಿರುವ ಕೊರೊನಾ ವೈರಸ್ ಅನೇಕ ಸಾವು, ನೋವು ನಷ್ಟಗಳಿಗೆ ಕಾರಣವಾಗಿರುವಂತೆಯೇ ಸಮಾಜದಲ್ಲಿ ಒಂದು ರೀತಿಯ ಪರಿವರ್ತನೆಗೂ ಕಾರಣವಾಗಿದೆ. ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಪ್ರಕೃತಿಗೆ ಹೊಸ ಹೊಳಪು ಬಂದಂತಾಗಿದ್ದು,ನೈರ್ಮಲ್ಯತೆಯ ಪಾಠ ಕಲಿಸಿದೆ. ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದ್ದು, ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ.
ವಾಯು ಗುಣಮಟ್ಟದಲ್ಲಿ ಮಹತ್ವದ ಸುಧಾರಣೆ
ದೇಶದಲ್ಲಿ ಮಾರ್ಚ್ 25 ರಿಂದ ಲಾಕ್ ಡೌನ್ ಜಾರಿಯಲಿದ್ದು, ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಮಹತ್ವದ ಸುಧಾರಣೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ನಿರ್ವಹಣಾ ಪ್ರಕ್ರಿಯೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯ 64 ದಾಖಲಾಗಿದೆ. ಇದು ಏಪ್ರಿಲ್ 15 ರ ಹೊತ್ತಿಗೆ ತೃಪ್ತಿಕರವಾಗಿ ಉತ್ತಮ ಹವಾನಿಯಂತ್ರಣವಾಗಿದೆ, ಆದರೆ 2019 ರ ಏಪ್ರಿಲ್‌ನಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಮೌಲ್ಯ 87
ಆಗಿತ್ತು ಎಂದು ಸಂಶೋಧನೆ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ಲೇಷಿಸಿರುವಂತೆ 103 ನಗರಗಳಲ್ಲಿ ಶೇ. 90 ರಷ್ಟು ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ ತೃಪ್ತಿಕರವಾಗಿದೆ.
ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯದ ಪ್ರಕಾರ 0-50 ನಡುವಿನ ಶ್ರೇಣಿಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ, 51-100 ತೃಪ್ತಿದಾಯಕ, 101-200 ಮಧ್ಯಮ ಎನ್ನಲಾಗುತ್ತದೆ, ಆದರೆ ಅದನ್ನು ಮೀರಿದ ಶ್ರೇಣಿಯನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ ಇಂತಹ ಕಡೆಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುವುದರೊಂದಿಗೆ ಮಟ್ಟ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.








