ಬೆಂಗಳೂರು : ಡ್ರಗ್ ಮಾಫಿಯಾವನ್ನು ಎದುರಿಸಲು ಇಂದ್ರಜಿತ್ ಅವರು ಮುಂದೇ ನಿಂತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತು ಸುದ್ದಿಯಾಗುತ್ತಿರುವ ಬಗ್ಗೆ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ವಿಜಯ್, ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆ ಆಗಲೇಬೇಕು. ಕೇವಲ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಯುವ ಜನತೆಗೆ ಇದರಿಂದ ಒಳ್ಳೆ ಕೆಲಸ ಆಗುತ್ತದೆ. ಇಂದ್ರಜಿತ್ ಅವರು ಮಾಡಿದ ಕೆಲಸದಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಇಂದ್ರಜಿತ್ ಪರ ವಿಜಯ್ ಬ್ಯಾಟ್ ಬೀಸಿದ್ದಾರೆ.
ಸಾಮಾಜಿಕ ಜಾಗೃತಿಗಾಗಿ ಇಂದ್ರಜಿತ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದು, ಎಲ್ಲವೂ ಬೆಳಕಿಗೆ ಬರಲಿದೆ. ಫಿಟ್ನೆಸ್ ಜಗತ್ತಿನಲ್ಲೂ ಇಂತಹ ಅನುಭವ ನನಗೆ ಆಗಿಲ್ಲ. ಆದರೆ ಈ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇದೆ ಎಂದ ವಿಜಯ್, ಯಾರೇ ಇಂತಹ ಡ್ರಗ್ಸ್ ಸೇವನೆ ಒಳಗಾಗಿದ್ದರೂ ದಯವಿಟ್ಟು ಅದನ್ನು ಬಿಟ್ಟು ಹೊರ ಬನ್ನಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಚಿರಂಜೀವಿ ಸರ್ಜಾ ಕುರಿತು ಇಂದ್ರಜಿತ್ ಲಂಕೇಶ್ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿ, ಸಾವನ್ನಪ್ಪಿರುವವರ ಬಗ್ಗೆ ಮಾತನಾಡುವುದು ತಪ್ಪು. ಏಕೆಂದರೆ ಆ ಕುಟುಂಬ ಈಗಾಗಲೇ ಸಾಕಷ್ಟು ನೋವಿನಲ್ಲಿರುತ್ತದೆ. ಆದ್ದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇಂದ್ರಜಿತ್ ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಚಿರಂಜೀವಿ ಅವರ ನಿಧನ ನಮಗೂ ಸಾಕಷ್ಟು ನೋವು ಮಾಡಿದೆ ಎಂದು ತಿಳಿಸಿದ್ದಾರೆ.








