ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಸರ್ವಧರ್ಮೀಯರು ಸಂಭ್ರಮಿಸುವ ನಾಡಹಬ್ಬವೇ ಹೊರತು, ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
“ದಸರಾ ಒಂದು ಧರ್ಮಕ್ಕೆ ಸೀಮಿತವಲ್ಲ”
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಿ ಪ್ರತಾಪ್ ಸಿಂಹ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದನ್ನು ಪ್ರಸ್ತಾಪಿಸಿದ ಸಿಎಂ, “ವಿಷಯ ಈಗ ನ್ಯಾಯಾಲಯದಲ್ಲಿದೆ, ಅಲ್ಲಿಯೇ ಇತ್ಯರ್ಥವಾಗಲಿ.
ಆದರೆ, ದಸರಾ ಕೇವಲ ಒಂದು ಧರ್ಮದ ಆಚರಣೆಯಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ನಾಡಹಬ್ಬ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಎಲ್ಲ ಧರ್ಮದವರೂ ಸೌಹಾರ್ದದಿಂದ ಪಾಲ್ಗೊಳ್ಳುತ್ತಾರೆ. ಇದು ಸಾರ್ವತ್ರಿಕ ಉತ್ಸವವಾಗಿದ್ದು, ಯಾರೇ ಆಗಲಿ ಇದನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಲು ಯತ್ನಿಸಬಾರದು” ಎಂದು ಹೇಳಿದರು.
ಶಾಂತಿ ಕದಡಿದರೆ ಪೊಲೀಸ್ ಕ್ರಮ ನಿಶ್ಚಿತ
ಪ್ರತಾಪ್ ಸಿಂಹ ಅವರ ನಿರಂತರ ವಿರೋಧದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, “ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ, ಅದರ ಹೆಸರಿನಲ್ಲಿ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಕೆಲಸವನ್ನು ಯಾರೇ ಮಾಡಿದರೂ ಸರ್ಕಾರ ಸಹಿಸುವುದಿಲ್ಲ. ಒಂದು ವೇಳೆ ಪ್ರತಾಪ್ ಸಿಂಹ ಅವರು ಶಾಂತಿಭಂಗ ಮಾಡುವ ಕೆಲಸಕ್ಕೆ ಕೈಹಾಕಿದರೆ, ಪೊಲೀಸರು ಮುಲಾಜಿಲ್ಲದೆ ತಮ್ಮ ಕ್ರಮ ಕೈಗೊಳ್ಳಲಿದ್ದಾರೆ” ಎಂದು ಗುಡುಗಿದರು.
“ನಾನೂ ಹಿಂದೂ, ನನ್ನ ಹೆಸರಲ್ಲೇ ರಾಮ-ಈಶ್ವರ ಇದ್ದಾರೆ”
ಸರ್ಕಾರ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಈ ಆರೋಪ ಶುದ್ಧ ಸುಳ್ಳು. ನಾನೂ ಕೂಡ ಒಬ್ಬ ಹಿಂದೂ. ನನ್ನ ಹೆಸರಾದ ‘ಸಿದ್ದರಾಮಯ್ಯ’ ಎಂಬುದರಲ್ಲಿ ‘ಸಿದ್ದ’ ಎಂದರೆ ಈಶ್ವರ, ‘ರಾಮ’ ಎಂದರೆ ರಾಮ. ಹೀಗೆ ನನ್ನ ಹೆಸರಿನಲ್ಲಿಯೇ ಇಬ್ಬರು ದೇವರುಗಳಿದ್ದಾರೆ. ನಾವು ಯಾರೊಬ್ಬರ ಧಾರ್ಮಿಕ ಭಾವನೆಗೂ ಧಕ್ಕೆ ತರುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಪ್ರಚೋದನಕಾರಿ ಭಾಷಣ ಸಹಿಸಲ್ಲ
ಬಿಜೆಪಿ ನಾಯಕರಾದ ಸಿ.ಟಿ. ರವಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ಸಮರ್ಥಿಸಿಕೊಂಡ ಸಿಎಂ, “ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡುವುದು ಸರ್ಕಾರದ ಪ್ರಮುಖ ಜವಾಬ್ದಾರಿ. ಬಿಜೆಪಿಯವರು ಸಮಾಜವನ್ನು ಒಡೆಯುವಂತಹ, ಪ್ರಚೋದನಕಾರಿ ಭಾಷಣಗಳನ್ನು ಮಾಡಿದರೆ ಸರ್ಕಾರ ಏನು ಮಾಡಬೇಕು? ಸುಮ್ಮನೆ ಕೂರಬೇಕೆ? ಇಂತಹ ಕೃತ್ಯಗಳನ್ನು ತಡೆಯಲಿಕ್ಕಾಗಿಯೇ ಕಾನೂನು ಕ್ರಮ ಜರುಗಿಸುತ್ತೇವೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ,” ಎಂದು ಖಡಾಖಂಡಿತವಾಗಿ ನುಡಿದರು.








