ಕಲಬುರಗಿ: ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡಿವೈಎಸ್ಪಿಯೊಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿದೆ.
ಕಲಬುರಗಿ ಜಿಲ್ಲೆ ಶಹಾಬಾದ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ವಿಜಯಲಕ್ಷ್ಮಿ ಎಂಬುವರಿಗೆ ಕಲಬುರಗಿಯ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

ಸದ್ಯ ವಿಜಯಲಕ್ಷ್ಮಿ ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಸಿಆರ್ ಸೆಲ್)ದಲ್ಲಿ ಡಿವೈಎಸ್ಪಿಯಾಗಿದ್ದಾರೆ. 2015ರ ಡಿಸೆಂಬರ್‍ನಲ್ಲಿ ದೇವನ ತೆಗನೂರಿನಲ್ಲಿ ಪೆಟ್ರೋಲ್ ಬಂಕ್‍ನಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ತೆರಳಿದಾಗ ಪೊಲೀಸ್ ಸಿಬ್ಬಂದಿ ಜತೆ ಜಗಳವಾಡಿದ್ದ ರಾಜು ಎಂಬುವರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜುನನ್ನು ಬಂಧಿಸಿ ಪೊಲೀಸರು ಟಾಟಾ ಸುಮೋ ಜಪ್ತಿ ಮಾಡಿಕೊಂಡಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ವಾಹನ ಬಿಡಿಸಿಕೊಳ್ಳಲು ರಾಜು ಶಹಾಬಾದ್ ಠಾಣೆಗೆ ಬಂದಿದ್ದರು. ಈ ವೇಳೆ ಟಾಟಾ ಸುಮೋ ವಾಪಸ್ ಕೊಡಲು ಇನ್ಸ್‍ಪೆಕ್ಟರ್ ಆಗಿದ್ದ ವಿಜಯಲಕ್ಷ್ಮಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತರು ದಾಳಿ ನಡೆಸಿದಾಗ ಹಣದ ಸಮೇತ ವಿಜಯಲಕ್ಷ್ಮಿ ಸಿಕ್ಕಿಬಿದ್ದಿದ್ದರು. ಕಲಬುರಗಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಲೋಕಾಯುಕ್ತರ ಪರ ಸರ್ಕಾರಿ ಅಭಿಯೋಜಕ ಅಶೋಕ ಚಾಂದಕವಟೆ ವಾದ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ ಕಲಬುರಗಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಸತೀಶಸಿಂಗ್, ಆರೋಪಿ ವಿಜಯಲಕ್ಷ್ಮಿಗೆ ಎರಡು ಸೆಕ್ಷನ್‍ಗಳ ಪೈಕಿ ಒಂದರಲ್ಲಿ ಮೂರು, ಮತ್ತೊಂದು ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








