ಅಲಸ್ಕಾ ಪೆನಿನ್ಸುಲಾ ದ್ವೀಪದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ತಡರಾತ್ರಿ 11: 12ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ. ಇದಲ್ಲದೆ ಸುನಾಮಿಯಾಗುವ ಸಾಧ್ಯತೆಯಿದೆ ಎಂದೂ ಭೂವೈಜ್ಞಾನಿಕ ಸಮೀಕ್ಷೆ ಎಚ್ಚರಿಸಿದೆ.
ಭೂಕಂಪದ ತೀವ್ರತೆಯು ಪ್ರಬಲವಾಗಿದ್ದರಿಂದ ದಕ್ಷಿಣ ಅಲಸ್ಕಾ, ಅಲಸ್ಕಾ ಪೆನಿನ್ಸುಲಾ ಮತ್ತು ಅಲ್ಯೂಶಿಯನ್ ದ್ವೀಪಗಳ ಸುತ್ತಲಿನ ಸುಮಾರು 300 ಕಿ.ಮೀ ವಿಸ್ತೀರ್ಣದಲ್ಲಿ ಸುನಾಮಿ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸುಮಾನಿಯಾಗುವ ಸೂಚನೆ ನೀಡಿದ್ದು, ಅಮೆರಿಕ ಮತ್ತು ಉತ್ತರ ಅಮೆರಿಕದ ಕೆನಡಿಯನ್ ಪೆಸಿಫಿಕ್ ತೀರಗಳಲ್ಲಿ ಸುನಾಮಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸುನಾಮಿ ಎಚ್ಚರಿಕಾ ಪ್ರದೇಶಗಳಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.








