ಭಾರಿ ಮಳೆಗೆ ಕೇರಳದ ಮುನ್ನಾರ್‌ನಲ್ಲಿ ಭೂಕುಸಿತ – ಐವರ ಸಾವು
ಮುನ್ನಾರ್, ಅಗಸ್ಟ್ 7: ಭಾರಿ ಮಳೆಯಿಂದಾಗಿ ಶುಕ್ರವಾರ ಮುಂಜಾನೆ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿ ಎಂಬಲ್ಲಿ ಮನೆಗಳ ಮೇಲೆ ದಿಬ್ಬವೊಂದು ಕುಸಿದು ಬಿದ್ದು ಐದು ಚಹಾ ಎಸ್ಟೇಟ್ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಗಾಯಗೊಂಡ ಇತರ ಐವರನ್ನು ಟಾಟಾ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ತೋಟದ ಕಾರ್ಮಿಕರ 20 ಮನೆಗಳು ಸಮಾಧಿಯಾಗಿದ್ದು ಕನಿಷ್ಠ 70 ಜನರು ಮಣ್ಣಿನ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಜಿಲ್ಲಾಡಳಿತವು ಈ ಪ್ರದೇಶದ ಆಸ್ಪತ್ರೆಗಳನ್ನು ಸಿದ್ಧವಾಗಿರಲು ಹೇಳಿದೆ. ಇಡುಕ್ಕಿಯಲ್ಲಿ ಭೂಕುಸಿತದಿಂದ ಹಾನಿಗೊಳಗಾದವರಿಗೆ ವೈದ್ಯಕೀಯ ನೆರವು ನೀಡಲು ಕೇರಳ ಆರೋಗ್ಯ ಇಲಾಖೆ 15 ಆಂಬುಲೆನ್ಸ್‌ಗಳನ್ನು ಮತ್ತು ವಿಶೇಷ ವೈದ್ಯಕೀಯ ತಂಡವನ್ನು ರವಾನಿಸಿದೆ.
ಇಡುಕ್ಕಿಯಲ್ಲಿನ ರಕ್ಷಣಾ ಕಾರ್ಯಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಲಿಕಾಪ್ಟರ್ ಕೋರಿ ವಾಯುಸೇನೆಯನ್ನು ಸಂಪರ್ಕಿಸಿದ್ದಾರೆ.

ಇಡುಕ್ಕಿಯಲ್ಲಿನ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅನ್ನು ನಿಯೋಜಿಸಲಾಗಿದೆ. ತ್ರಿಶೂರ್‌ನ ಮತ್ತೊಂದು ಎನ್‌ಡಿಆರ್‌ಎಫ್ ತಂಡವನ್ನು ಇಡುಕಿಗೆ ತೆರಳುವಂತೆ ನಿರ್ದೇಶಿಸಲಾಗಿದೆ ಎಂದು ವಿಜಯನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಯನಾಡ್ ಸೇರಿದಂತೆ ಕೇರಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆಗಸ್ಟ್ 11 ರವರೆಗೆ ರಾಜ್ಯಕ್ಕೆ ಅತಿ ಹೆಚ್ಚು ಮಳೆ ಬೀಳುವ ಎಚ್ಚರಿಕೆ ನೀಡಿದೆ.








